ಕುಂದಾಪುರ ; ಮಹಾತ್ಮಾ ಗಾಂಧಿ ಎಂದೊಡನೆ ಮೊದಲಿಗೆ ನೆನಪಾಗುವುದು ಅವರು ತನ್ನ ಜೀವನದಲ್ಲಿ ಪಾಲಿಸಿದ “ಸರಳತೆ, ಸತ್ಯ, ನ್ಯಾಯ, ನೀತಿ ಹಾಗೂ ಅಹಿಂಸೆಯ ಹೋರಾಟ” ಗಳಾದರೂ ಸ್ವಾತಂತ್ರ್ಯ ನಂತರದಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ ಒಂದು ವರ್ಗದ ಪ್ರಬಲ ವಿರೋಧದ ನಡುವೆಯೂ ಅವರು “ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ರಚಿಸಲು ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ದೇಶದ ಪ್ರಥಮ ಕಾನೂನು ಸಚಿವರನ್ನಾಗಿಯೂ ನೇಮಿಸಲು ಬೆಂಬಲಿಸುತ್ತಾರೆ. ಗಾಂಧಿ ಚಿಂತನೆಯ ಪ್ರತೀಕವಾಗಿ ಈ ದೇಶದ ಶೋಷಿತ ವರ್ಗ ಅಂಬೇಡ್ಕರ್ ಸಂವಿಧಾನದ ಮೂಲಕ ನಿಜ ಅರ್ಥದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಸಂವಿಧಾನದ ಮೂಲಕ ಅಂತಹ ಬದಲಾವಣೆಯನ್ನು ತಂದಿದ್ದ ಆ ಮಹಾತ್ಮನನ್ನು ಮನುವಾದಿ ಸಂಘಟನೆಯ ಸದಸ್ಯ ಘೋಡ್ಸೆ ಗುಂಡಿಟ್ಟು ಕೊಲ್ಲುತ್ತಾನೆ. ಗಾಂಧಿ ಮಾಡಿದ್ದ ತಪ್ಪು ಏನೆಂದರೆ ಅವರು ಶೋಷಿತರ ಪರ ಸಂವಿಧಾನ ಜಾರಿಗೆ ಕಾರಣೀಭೂತರಾಗಿದ್ದು ಆಗಿತ್ತು ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.
ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧಿ ಹುತ್ಮಾನ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಆ ಸಂವಿಧಾನದ ಆಶಯದಂತೆ ದೇಶದ ಮೂಲೆಮೂಲೆಗಳಲ್ಲಿ ಸರ್ಕಾರಿ ಶಾಲೆಗಳನ್ನು, ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ಉಚಿತ ಸೇವೆಯನ್ನು ಒದಗಿಸಲಾಗುತ್ತದೆ. ದರಖಾಸ್ತು ಮತ್ತಿತರ ಕಾನೂನಿನಡಿಯಲ್ಲಿ ಭೂಮಿಯ ಹಂಚಿಕೆ ನಡೆದು ಈ ನೆಲದಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾಗಿದ್ದ ಜನರಿಗೆ ಸ್ವಾತಂತ್ರ್ಯ ನೀಡಲಾಗುತ್ತದೆ. ಆದರೆ, ಇತ್ತೀಚೆಗೆ ಕೆಲವು ಸಂವಿಧಾನ ವಿರೋಧಿ ಶಕ್ತಿಗಳು ಈ ನಮ್ಮ ಸ್ವತಂತ್ರ ಭಾರತದ “ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು” ಸಿದ್ದಾಂತದ ಅಂಬೇಡ್ಕರ್ ಸಂವಿಧಾನವನ್ನು ಬದಲಿಸುವ ಕುರಿತು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇದೀಗ ಸರ್ವರಿಗೂ ಹಕ್ಕುಗಳನ್ನು ನೀಡುವ ಅಂಬೇಡ್ಕರ್ ಸಂವಿಧಾನವನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುವ, ಗುಪ್ತಕಾರ್ಯಸೂಚಿಯನ್ನು ಹೊಂದಿರುವ ಕೆಲವು ಸಂವಿಧಾನ ವಿರೋಧಿ ಸಂಘಟನೆಗಳು ಅಸಮಾನತೆಯನ್ನು ಪ್ರತಿಪಾದಿಸುವ ಅದೇ ಆ ಹಳೆಯ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಮತ್ತೇ ಜಾರಿಗೊಳಿಸುವ ನಿಟ್ಡಿನಲ್ಲಿ ಹೊಸ ಸಂವಿಧಾನವನ್ನು ಸಿದ್ದಗೊಳಿಸಿರುವ ಕುರಿತು ಹಲವು ಪ್ರಮುಖ ದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಬಹುಶಃ ಇದನ್ನು ಅಂಬೇಡ್ಕರ್ ಸಂವಿಧಾನದ ಫಲಾನುಭವಿಗಳಾದ ನಾವು ವಿರೋಧಿಸಬೇಕಾಗಿದೆ. ಸಂವಿಧಾನದ ರಕ್ಷಣೆಗೆ ಈಗಿಂದೀಗಲೇ ನಾವು ಹೋರಾಟ ಆರಂಭಿಸಬೇಕಿದೆ ಎಂದವರು ಹೇಳಿದ್ದಾರೆ.
ಮಹಾತ್ಮಾ ಗಾಂಧಿಯವರು ಜಗತ್ತುಕಂಡ ಓರ್ವ ಆದರ್ಶಪುರುಷ. ಇಡೀ ವಿಶ್ವವೇ ಅವರ ಹೋರಾಟವನ್ನು ಮತ್ತವರ ಚಿಂತನೆಯನ್ನು ಗೌರವಿಸುತ್ತದೆ. ಆದರೆ ಅವರು ಹೊಂದಿದ್ದ “ಸಮಾನತೆಯ ಸಿದ್ದಾಂತ”ದ ಕಾರಣಕ್ಕಾಗಿ ಅವರನ್ನು ಕೊಂದಿರುವುದು ಮತ್ತು ಈಗಲೂ ಅವರನ್ನು ವಿರೋಧಿಸುತ್ತಿರುವುದರ ಹಿಂದೆ ಈ ನೆಲದ ಶೋಷಕ ವರ್ಗದ “ಗುಪ್ತ ಕಾರ್ಯಸೂಚಿ” ಅಡಗಿದೆ. ನಾವಿದನ್ನು ವಿರೋಧಿಸಲು ಯಾವುದೇ ಭಯಪಡಬೇಕಿಲ್ಲ. ಇದು ನಮ್ಮ ಕನಿಷ್ಠ ಕರ್ತವ್ಯ ಕೂಡ ಆಗಿದೆ ಎಂದು ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಹೇಳಿದರು.
ಅಂಬೆಡ್ಕರ್ ಸಂವಿಧಾನದ ಮೂಲಕ ಈ ನೆಲದ ಕಟ್ಟಕಡೆಯ ಪ್ರಜೆ ಕೂಡ ಸಕಲ ಹಕ್ಕುಗಳನ್ನು ಪಡೆಯುವಂತಾಯಿತು. ಅಂತಹ ಸಂವಿಧಾನದ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬಹು ನಿಷ್ಠೆಯಿಂದ ಮಾಡುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಕುರಿತು ಜನಾಭಿಪ್ರಾಯ ಮೂಡಿಸುವ ಕಾರ್ಯವನ್ನು ಜವಾಬ್ದಾರಿಯುತ ಪಕ್ಷದ ಪದಾದಿಕಾರಿಗಳಾಗಿ ನಾವು ಮಾಡಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಹೇಳಿದರು.
ಗಾಂಧಿಯವರ ಕುರಿತು ಮಾತನಾಡುವಾಗ ಎಲ್ಲರೂ ಸಾಮಾನ್ಯವಾಗಿ ಅವರ ಹುಟ್ಟು, ಅವರ ತಂದೆತಾಯಿ, ಅವರ ಜೀವನ ಚರಿತ್ರೆ ಮತ್ತವರ ದಕ್ಷಿಣ ಆಫ್ರಿಕಾದ ಹೋರಾಟವನ್ನು ವಿವರಿಸುತ್ತಾರೆ. ಆದರೆ ನಾವು ಅದೇ ಸಮಯದಲ್ಲಿ ಗಾಂಧಿಯವರ ಚಿಂತನೆಗಳನ್ನು ಹೆಚ್ಚುಹೆಚ್ಚು ಜನರಿಗೆ ತಲುಪಿಸುವ ಕೆಲಸಗಳನ್ನು ಮಾಡಬೇಕು. ಆಗ ಮಾತ್ರವೇ ಗಾಂಧಿ ಸಿದ್ದಾಂತದ ಆಳದ ಅರಿವು ಯುವ ವರ್ಗಕ್ಕೆ ದೊರೆಯಲಿದೆ ಎಂದು ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹೇಳಿದರು.
ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿರಾಜ್ ಪೂಜಾರಿ, ತಾಲೂಕು ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷ ಅಮಾಸೆಬೈಲು ಕೃಷ್ಣ ಪೂಜಾರಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಆಶಾ ಕರ್ವಾಲೋ, ಕುಂದೇಶ್ವರ ದೇವಸ್ಥಾನದ ಟ್ರಸ್ಟಿ ಸೀಮಾಚಂದ್ರ ಪೂಜಾರಿ, ಪ್ರಮುಖರಾದ ಕೋಣಿ ನಾರಾಯಣ ಆಚಾರ್ , ಕೆ.ಪಿ ಅರುಣ್, ಜ್ಯೋತಿ ಡಿ. ನಾಯ್ಕ್, ರಿಯಾಝ್ ಕೋಡಿ, ವಿವೇಕಾನಂದ, ಪ್ರೇಮಾ ಡಿ’ ಕುನ್ಹಾ, ಜೋಯ್ ರೆಬೊಲ್ಲೋ, ವೇಲಾ ಬ್ರಗಾಂಜಾ, ಅಲ್ಫಾಝ್, ಜೋಸೆಫ್ ರೆಬೆಲ್ಲೋ, ನಿತಿನ್ ಡಿ’ಸೋಜಾ ಕೋಣಿ, ಮೇಬೆಲ್ ಡಿ’ಸೋಜ, ರಾಕೇಶ್ ಶೆಟ್ಟಿ, ಮುನಾಫ್ ಕೋಡಿ, ವಿಜಯ್ ಮುಂತಾದವರು ಉಪಸ್ಥಿತರಿದ್ದರು.