ಶ್ರೀನಿವಾಸಪುರ: ಸಂಘ ಜೀವಿಯಾದ ಮನುಷ್ಯ ಸ್ವಾಭಿಮಾನದಿಂದ ಬದುಕಲು ಮೂಲಭೂತ ಹಕ್ಕುಗಳು ಅವಕಾಶ ಕಲ್ಪಿಸುತ್ತವೆ. ಮಾನವ ಹಕ್ಕು ನಿರಾಕರಣೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ವಕೀಲರ ಸಂಘದಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ಬದಲಾದ ಪರಿಸ್ಥಿತಿಯಲ್ಲಿ ಹಕ್ಕುಗಳ ರಕ್ಷಣೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಮಾನವ ಹಕ್ಕು ಸಾಮಾಜಿಕ ಹಕ್ಕಾಗಿದ್ದು, ಸಾಂಘಿಕ ಪ್ರಯತ್ನದ ಮೂಲಕ ಸಂರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಶೋಷಣೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಸ್ಥಳೀಯ ಜೆಎಂಎಫ್ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಮಾನವನ ಘನತೆ ರಕ್ಷಣೆ ಉದ್ದೇಶದಿಂದ ವಿಶ್ವದ ಎಲ್ಲ ದೇಶಗಳೂ ಮಾನವ ಹಕ್ಕುಗಳನ್ನು ಒಪ್ಪಿಕೊಂಡಿವೆ. ಎರಡನೇ ಜಾಗತಿಕ ಯುದ್ಧದಲ್ಲಿ ಸಂಭವಿಸಿದ ಅಮಾನವೀಯ ಘಟನೆಗಳು ಮಾನವ ಹಕ್ಕುಗಳ ಜಾರಿಗೆ ಕಾರಣವಾದವು ಎಂದು ಹೇಳಿದರು.
ಮಾನವ ಹಕ್ಕು ಆಯೋಗ, ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುತ್ತದೆ. ಮಾನವ ಹಕ್ಕು ನಿರಾಕರಣೆ ಆದಲ್ಲಿ, ನೊಂದವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ, ಪರಿಹಾರ ಪಡೆದುಕೊಳ್ಳಬಹುದಾಗಿದೆ. ಅದಕ್ಕೆ ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಅರಿತಿರಬೇಕು. ಅರ್ಹ ಫಲಾನುಭವಿಗಳು ಉಚಿತ ಕಾನೂನು ನೆರವು ಪಡೆಯುವ ಅವಕಾಶವೂ ಇದೆ. ಕಾನೂನು ಗೊತ್ತಿಲ್ಲದಿರುವುದು ಕ್ಷಮೆಗೆ ಅರ್ಹವಾಗುವುದಿಲ್ಲ ಎಂದು ಹೇಳಿದರು.
ಮಾನವ ಹಕ್ಕುಗಳು ಹಾಗೂ ಭಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಪ್ರಾಂಶುಪಾಲೆ ಆರ್.ಮಾಧವಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಪ್ಪ ಮಾತನಾಡಿದರು.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳಾದ ಅಬ್ದುಲ್ ವಾಜೀದ್ ಸಾಬ್, ನಾಗೇಂದ್ರ, ರವಿ, ಉಪ ಪ್ರಾಂಶುಪಾಲೆ ರಾಧಾಮಣಿ, ಉಪನ್ಯಾಸಕ ಶೇಷಗಿರಿ, ರಾಮ್ಚರಣ್, ಶ್ರೀತೇಜ ಇದ್ದರು.