ಕೋಲಾರ, ಜ.1 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲ ಮತ್ತು ಸಬ್ಸಿಡಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕ್ ಗಳ ಸಂಪೂರ್ಣ ಸಹಕಾರ ಅಗತ್ಯ ಎಂದು ಜಿ.ಪಂ ಸಿಇಓ ಪದ್ಮ ಬಸವಂತಪ್ಪ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲ ಮತ್ತು ಸಬ್ಸಿಡಿ ಯೋಜನೆಗಳು ಅಶಕ್ತರ ಪಾಲಿಗೆ ವರದಾನ. ಅಂತಹ ಮಹತ್ವದ ಯೋಜನೆಗಳಿಗೆ ಬ್ಯಾಂಕ್ ಗಳು ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳು ರೈತರಿಗೆ ಕೃಷಿ ಸಾಲ ನೀಡಲು ಹಿಂಜರಿಯಬಾರದು. ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಕೃಷಿ ವಲಯವು ಅಭಿವೃದ್ದಿಯಾಗಬೇಕಾದರೆ ಬ್ಯಾಂಕರ್ ಗಳು ರೈತರಿಗೆ ಹೆಚ್ಚಿನ ಸಾಲ ನೀಡುವತ್ತ ಗಮನಹರಿಸಬೇಕು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀರ್.ಎಸ್. ಮಾತನಾಡಿ, ಕೃಷಿ, ಸಣ್ಣ, ಮಧ್ಯಮ ಕೈಗಾರಿಕೆ, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಬ್ಯಾಂಕ್ ಗಳು ಮುಂದಾಗಬೇಕು ಎಂದು ಹೇಳಿದರು.
ಅರ್ಹ ವ್ಯಕ್ತಿಗಳಿಗೆ ತಡ ಮಾಡದೆ ಸಾಲ ನೀಡುವ ಮೂಲಕ ಬ್ಯಾಂಕ್ ಗಳು ವಿಶ್ವಾಸ ಉಳಿಸಿಕೊಳ್ಳಬೇಕು. ವಿನಾ ಕಾರಣ ಅಲೆದಾಡಿಸದೆ ಸಕಾಲದಲ್ಲಿ ಅರ್ಹರಿಗೆ ಸೌಲಭ್ಯ ನೀಡಬೇಕು ಎಂದರು.
ರಿಸರ್ವ್ ಬ್ಯಾಂಕ್ ಇಂಡಿಯಾ ಪ್ರಾದೇಶಿಕ ಅಧಿಕಾರಿ ವೆಂಕಟರಾಮಯ್ಯ ಮಾತನಾಡಿ, ಆರ್.ಬಿ.ಐ ಚಲಾವಣೆಗೆ ತಂದಿರುವ 10 ರೂ. ನಾಣ್ಯಗಳನ್ನು ಬ್ಯಾಂಕ್ ಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಸ್ವೀಕರಿಸಿ, ಚಲಾವಣೆ ಮಾಡಬಹುದು.
ಕೆಲ ವದಂತಿಗಳಿಂದ ಸಾರ್ವಜನಿಕರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಬ್ಯಾಂಕ್ ಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ನಬಾರ್ಡ್ ಬ್ಯಾಂಕ್ ಅಧಿಕಾರಿ ಎಂ.ಜಿ ಮನೋಜ್ ಕುಮಾರ್, ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಅಶೋಕ್ ಕುಮಾರ್, ಯೂನಿಯನ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಗುಲ್ ಶಾನ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ಯೋಜನಾ ನಿರ್ದೇಶಕ ರವಿಚಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.