ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಅಂಬೇಡ್ಕರ್ ವಿಶ್ವದ ಎಲ್ಲಾ ಧರ್ಮಗ್ರಂಥಗಳು ಹಾಗೂ ಸಂವಿಧಾನಗಳನ್ನು ಅಧ್ಯಯನ ಮಾಡಿ ಸರ್ವರಿಗೂ ಸಮಾನ ಅವಕಾಶಗಳುಳ್ಳ ಸಂವಿಧಾನವನ್ನು ನೀಡಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಮಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದರು.
ನಗರದ ಜಿಲ್ಲಾ ನೌಕರರ ಭವನದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಾನವೀಯತೆ ಸೌಹಾರ್ದತೆ ಮತ್ತು ಭ್ರಾತೃತ್ವ, ಜಾತ್ಯತೀತ ಮನೋಧರ್ಮದ ತಳಹದಿಯಲ್ಲಿ ಭಾರತದ ಸಂವಿಧಾನ ರಚನೆಯಾಗಿದೆ, ಶೋಷಣೆ, ಅಸಮಾನತೆ ತೊಡೆದು ಹಾಕಲು ಭಾರತಕ್ಕೆ ಇದೇ ಅಸ್ತ್ರವಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದ ಸಂಕೇತವಾಗಿರುವುದು ಭಾರತದ ಹೆಗ್ಗಳಿಕೆಯಾಗಿದೆಯೆಂದು ತಿಳಿಸಿ, ಆಕ್ಸ್‍ಫರ್ಡ್‍ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ದಿನವಿಡೀ ಓದುತ್ತಿದ್ದ ಏಕೈಕ ವಿದ್ಯಾರ್ಥಿ ಅಂಬೇಡ್ಕರ್ ಆಗಿದ್ದು, ಕಠಿಣ ಪರಿಶ್ರಮ, ಸತತ ಅಭ್ಯಾಸ ಹಾಗೂ ಪರಿಶುದ್ಧ ಮನಸ್ಸಿನ ಪ್ರಾಮಾಣಿಕ ಪ್ರಯತ್ನದಿಂದ ಎಂತಹ ಬಡತನದಲ್ಲಿ ಹುಟ್ಟಿದ್ದರೂ ದೊಡ್ಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಅಂಬೇಡ್ಕರ್ ಇಂದಿಗೂ ನಿದರ್ಶನವಾಗಿದ್ದಾರೆ, ದೇಶದಲ್ಲಿ ಸಂವಿಧಾನ ಅನುಷ್ಠಾನದಲ್ಲಿರುವವರೆವಿಗೂ ಅಂಬೇಡ್ಕರ್ ಮತ್ತು ಅವರ ಆಶಯಗಳಿಗೆ ಸಾವಿಲ್ಲ ಎಂದು ಘೋಷಿಸಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೊತ್ತಮ್, ಎಂ.ನಾಗರಾಜ್, ಮಂಜುನಾಥ, ಅಜಯ್‍ಕುಮಾರ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್, ವಿಜಯಮ್ಮ, ಸಂಘದ ಪದಾಧಿಕಾರಿಗಳಾದ ಚಂದ್ರಕಲಾ, ಅನಿಲ್,ವೆಂಕಟಶಿವಪ್ಪ, ಆರೋಗ್ಯ ಇಲಾಖೆ ಶಿವಾರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ವೃಂದ ಸಂಘಗಳ ಆರ್.ಶ್ರೀನಿವಾಸನ್, ಆರ್.ನಾಗರಾಜ್, ಎಸ್‍ಪಿ ಕಚೇರಿ ನಾಗರಾಜ್, ರವಿ, ನಾರಾಯಣಸ್ವಾಮಿ ಮತ್ತಿತರರಿದ್ದರು.