ಕೋಲಾರ:- ಕೆಲಸದ ಒತ್ತಡದದಲ್ಲಿರುವ ಪತ್ರಕರ್ತರು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ರಕ್ತದೊತ್ತಡ, ಡಯಾಬಿಟೀಸ್ನಿಂದಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಾಗಬೇಕು ಎಂದು ನಗರದ ವಂಶೋದಯ ಅಡ್ವಾನ್ಸ್ಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಿರ್ದೇಶಕ ಡಾ.ಅರವಿಂದ್ ಸಲಹೆ ನೀಡಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಪತ್ರಕರ್ತರಿಗೆ ನಗರದ ವಂಶೋದಯ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡುತ್ತಿದ್ದರು.
ಅನೇಕರಿಗೆ ರಕ್ತದೊತ್ತಡ, ಡಯಾಬಿಟೀಸ್ ಇದ್ದರೂ ಅದರ ಅರಿವು ಇರುವುದಿಲ್ಲ ಮತ್ತು ತಪಾಸಣೆಗೆ ಒಳಗಾಗುವುದಿಲ್ಲ, ಇದು ಮುಂದೊಂದು ದಿನ ಮಾರಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು, ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಸೂಕ್ತ ಮುಂಜಾಗ್ರತೆ, ಅಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದರು.
ಇಂದು ಬದಲಾದ ಆಹಾರ ಪದ್ದತಿ ಹಾಗೂ ವ್ಯಾಯಾಮವಿಲ್ಲದ ಜೀವನದಿಂದ ಅನೇಕ ಆರೋಗ್ಯಸಮಸ್ಯೆಗಳು ಹತ್ತಿರವಾಗುತ್ತಿವೆ, ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡುವಾಗ ನೀವೂ ಆರೋಗ್ಯದಿಂದಿರಬೇಕು, ನಿಮಗಾಗಿ ನಿಮ್ಮ ಕುಟುಂಬವಿದೆ ಎಂಬುದನ್ನು ಅರಿತು ತಪಾಸಣೆ ಮಾಡಿಸಿಕೊಳ್ಳಿ ಮುಂಜಾಗ್ರತೆ ವಹಿಸಿ ಸಮಸ್ಯೆಯಿಂದ ಸುಲಭವಾಗಿ ಪಾರಗಬಹುದು ಎಂದರು.
ವಶೋದಯ ಆಸ್ಪತ್ರೆ ಸಮಾಜಮುಖಿಯಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಉಚಿತ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದ ಅವರು, ವಂಶೋದಯ ಆಸ್ಪತ್ರೆಯಲ್ಲಿ ನಿಮಗೆ ಎಲ್ಲಾ ರೀತಿಯ ಆಧುನಿಕ ಚಿಕಿತ್ಸಾ ವಿಧಾನ ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆಯಿರಿ ಎಂದ ಅವರು, ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಮನಸ್ಥಿತಿ ಇರುತ್ತದೆ ಎಂಬ ಮಾತಿದೆ, ನಿಮ್ಮ ಕರ್ತವ್ಯ ನಿರ್ವಹಣೆಗೂ ಆರೋಗ್ಯ ರಕ್ಷಣೆ ಅತಿ ಮುಖ್ಯವಾಗಿದೆ ಎಂದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಪತ್ರಕರ್ತರ ತಪಾಸಣೆಗೆ ಒಳಗಾಗಿದ್ದು, ಉಚಿತವಾಗಿ ಔಷಧಿ ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಇರುವ ಪತ್ರಕರ್ತರನ್ನು ಆಸ್ಪತ್ರೆಗೆ ಆಹ್ವಾನಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರ ಆರೋಗ್ಯದ ಕುರಿತು ಕಾಳಜಿವಹಿಸಿ, ಪತ್ರಿಕಾ ದಿನದಂದೇ ಉಚಿತ ಆರೋಗ್ಯ ತಪಾಸಣೆ ನಡೆಸಿದ ವಂಶೋಧಯ ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಪತ್ರಕರ್ತರಿಗೆ ರಕ್ತದೊತ್ತಡ, ಡಯಾಬಿಟೀಸ್ ಪರೀಕ್ಷೆ ಜತೆಗೆ ಉಸಿರಾಟ, ಶ್ವಾಸಕೋಶ ತೊಂದರೆಗಳ ಕುರಿತು ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಂಶೋದಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಅರವಿಂದ್, ಡಾ.ವಿನಯ್, ವೈದ್ಯ ಡಾ.ಮೊಹಮದ್ ಸುಹೇಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಪವಿತ್ರ, ಮಾರ್ಕೆಟಿಂಗ್ ಮ್ಯಾನೇಜರ್ ನಾಗೇಶ್ ಹಾಗೂ ವಂಶೋದಯ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿದ್ದರು.