ಯಲ್ದೂರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯಿಂದ ಉಚಿತ ನೋಟ್‍ಬುಕ್ ವಿತರಣೆ.

ಶ್ರೀನಿವಾಸಪುರ: ಶಿಕ್ಷಣ ತಜ್ಞ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ರವರು ಅನ್ನಕ್ಕೆ ಕಷ್ಟವಿದ್ದ ಕಾಲಘಟ್ಟದಲ್ಲಿ ವ್ಯಾಸಂಗ ಪಡೆದು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ಅವರ ಬೆಳವಣಿಗೆಯ ಹಿಂದೆ ಗುರುಗಳ ಶ್ರಮ ಇರುತ್ತದೆ ಎಂದು ಅರಿತು ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಡಾ|| ರಾಧಕೃಷ್ಣನ್ ರವರ ಮೊಮ್ಮಗ ಡಾ|| ಸುಬ್ರಮಣ್ಯಂಶರ್ಮ ಹೇಳಿದರು.
ತಾಲೂಕಿನ ಯಲ್ದೂರು ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯವರು ಶಾಲಾ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ತಾತ ರಾಧಕೃಷ್ಣನ್‍ರವರು ಹುಟ್ಟಿದ ಹಬ್ಬ ಪ್ರಪಂಚ ವ್ಯಾಪ್ತಿಯಲ್ಲಿ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಯಾವುದೇ ವ್ಯಕ್ತಿಯಾದರೂ ಜೀವಿತಾವಧಿಯಲ್ಲಿ ಮಾಡಿದ ಉತ್ತಮ ಸೇವೆ ಸಾಧನೆಯಿಂದ ಇಂತಹ ಸ್ಮರಣಿಯ ಕಾರ್ಯಕ್ರಮಗಳು ಮಾಡಲು ಸಾಧ್ಯವಾಗುತ್ತದೆ. ಅವರ ವ್ಯಾಸಂಗದ ದಿನಗಳಲ್ಲಿ ಪಡೆದ ಕಷ್ಟಗಳ ಬಗ್ಗೆ ನಮ್ಮ ಹಿರಿಯರು ತಿಳಿ ಹೇಳಿದ್ದಾರೆ. ಆದರೂ ಯಾವುದಕ್ಕೂ ಎದೆಗುಂದದೆ ಶ್ರದ್ದೆಯಿಂದ ದೇಶದ ಸೇವೆ ಮಾಡಲು ಪಣ ತೊಟ್ಟಿದ್ದ ರಾಧಕೃಷ್ಣನ್ ಕುಟುಂಬದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ ನಾವು ಮಾಡುವ ಉತ್ತಮ ಕೆಲಸಗಳ ಮೇಲೆ ಸಮಾಜದ ಅನುಭೂತಿ ಸಿಗುತ್ತದೆ. ಗುರುಗಳು ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ಮೊದಲು ತಂದೆ-ತಾಯಿಯನ್ನು ಸಂಸ್ಕಾರದಿಂದ ಗೌರವಿಸಬೇಕು ನಂತರ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಲ್ಲಿ ಶಾಲೆ ಮತ್ತು ಅಧ್ಯಾಪಕರು ಇರುತ್ತಾರೋ ಅಲ್ಲಿ ರಾಧಕೃಷ್ಣನ್ ಇರುತ್ತಾರೆ. ಅವರು ಇರುವ ಕಡೆ ಅವರ ಮನೆತನದವರು ನಾವು ಇರುತ್ತೇವೆ ಶಿಕ್ಷಣಕ್ಕಾಗಿ ಯಾವ ನೆರವು ಬೇಕಾದರೂ ನೀಡುತ್ತೇವೆ ಎಂದು ತಿಳಿಸಿ ಭವಿಷ್ಯದ ಭಾರತಕ್ಕೆ ನೀವು ಕನಸಿನ ವಿದ್ಯಾರ್ಥಿಗಳು ಆದ್ದರಿಂದ ಎಲ್ಲರೂ ಸತ್ಪಜೆಗಳಾಗಿ ಬೆಳೆಯಬೇಕು ಎಂದು ಅಶಿಸಿದರು.
ಡಾ|| ವೈ.ವಿ. ವೆಂಕಟಾಚಲ ಮಾತನಾಡಿ ನಮ್ಮ ಗುಣಲಕ್ಷಣಗಳು ವಂಶಪರಂಪರ್ಯವಾಗಿ ಬರುತ್ತದೆ ಅದೇ ರೀತಿ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ವಂಶದ ಕುಡಿ ಡಾ|| ಸುವ್ರಮಣ್ಯಂಶರ್ಮ ರವರಲ್ಲಿ ಕಾಣಬಹುದು ಅವರ ತಾತನ ತತ್ವ ಸಿದ್ದಾಂತಗಳಂತೆ ಶಿಕ್ಷಣ ಮತ್ತು ಶಿಕ್ಷಕರಿಗೆ ಗೌರವ ನೀಡುವ ನಿಟ್ಟಿನಲ್ಲಿ ಗಡಿಯಲ್ಲಿರುವ ನಮ್ಮ ತಾಲೂಕಿಗೆ ಬಂದಿರುವುದು ಅವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ತೋರುತ್ತದೆ, ಜಿಲ್ಲೆಯಲ್ಲಿ ಜಲ್ವಂತ ಸಮಸ್ಯೆಗಳ ಬಗ್ಗೆಯೂ ಯಾವುದೇ ಕೀಳರಿಮೆ ಇಲ್ಲದೆ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಶ್ರದ್ದೆಯಿಂದ ಶಿಕ್ಷಣ ಪಡೆದರೆ ಜೀವನದಲ್ಲಿ ಎಲ್ಲರಿಗೂ ಎಲ್ಲ ಅವಕಾಶಗಳು ಲಭಿಸುತ್ತದೆ. ಕೇವಲ ಕುಟುಂಬದ ಹಿನ್ನಲೆಯೇ ಮುಖ್ಯವಲ್ಲ ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ನಾವು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬಹುದು ಎಂದು ಹೇಳಿದರು.
ಮಾಜಿ ಸಂಸದ ಡಾ|| ವೆಂಕಟೇಶ್ ಮಾತನಾಡಿ ಮನುಷ್ಯ ಜನ್ಮ ತಾಳಿದರೆ ಪ್ರತಿಯೊಬ್ಬರಿಗೂ ಯಾವುದೋ ಒಂದು ಗುರಿ ಮುಟ್ಟಬೇಕಾದರೆ ಉತ್ತಮ ಕೆಲಸದಿಂದ, ಜ್ಞಾನದಿಂದ, ನಂಬಿಕೆಯಿಂದ ಹಾಗೂ ಶ್ರದ್ದೆಯಿಂದ ಗುರಿ ಸಾಧಿಸಲು ಸಾದ್ಯವಿದೆ. ಈ ಎಲ್ಲದ್ದಕ್ಕೂ ಮೂಲ ತಂದೆ-ತಾಯಿ ಮತ್ತು ಶಿಕ್ಷಕರ ಪ್ರೇರಣೆ ಮುಖ್ಯವಾಗಿರುತ್ತದೆ ಆದ್ದರಿಂದ ತಂದೆ-ತಾಯಿ ಮತ್ತು ಗುರುಗಳನ್ನು ನಿರಂತರವಾಗಿ ಶ್ರದ್ದಾಭಕ್ತಿಯಿಂದ ಗೌರವಿಸಬೇಕು.
ಈ ಸಂಧರ್ಭದಲ್ಲಿ ಪೀಪಲ್ ಪಾರ್ ಇಂಡಿಯಾ ಸಂಸ್ಥೆಯ ಪ್ರಶಾಂತ್‍ಸುಬ್ರಮಣಿ, ಆಮ್ ಆದ್ಮಿ ಪಕ್ಷದ ಬಾಬುರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ. ಕೃಷ್ಣಪ್ಪ, ನ್ಯಾಷನಲ್ ಹೈಸ್ಕೂಲಿನ ಮುಖ್ಯ ಶಿಕ್ಷಕ ಮೋಕ್ಷಲಿಂಗರಾಧ್ಯ, ಶಿಕ್ಷಕರಾದ ರಮೇಶ್‍ಬಾಬು, ಆನಂದ್, ಇ.ಸಿ.ಓ ಹನುಮೇಗೌಡ ಇತರರು ಇದ್ದರು.