ಮಣಿಪಾಲ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಹೃದಯ ತಪಾಸಣೆ ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ-ಜಿಪಂ ಸಿಇಒ ನಾಗರಾಜ್ ಕೃತಜ್ಞತೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಸೆ.28: ಸದಾ ಕರ್ತವ್ಯದ ಒತ್ತಡದಲ್ಲಿರುವ ಪತ್ರಕರ್ತರ ಆರೊಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಹೃದಯ ತಪಾಸಣೆಗೆ ಮುಂದಾಗಿರುವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ನಾಗರಾಜ್ ಧನ್ಯವಾದ ಸಲ್ಲಿಸಿದರು.
ಮಂಗಳವಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಸ್ವತಃ ಪರೀಕ್ಷೆಗೆ ಒಳಗಾಗಿ ಅವರು ಮಾತನಾಡುತ್ತಿದ್ದರು.
ನಿಯಮಿತ ವ್ಯಾಯಾಮ, ಜೀವನ ಶೈಲಿಯ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ಒತ್ತಡದ ಬದುಕಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ಪತ್ರಕರ್ತರು ಕಾಳಜಿ ವಹಿಸುವುದಿಲ್ಲ ಎಂದರು.
ಆದರೆ ಮಣಿಪಾಲ್ ಆಸ್ಪತ್ರೆ ಸಮಾಜಕ್ಕಾಗಿ ಸೇವೆ ಸಲ್ಲಿಸುವ ಪತ್ರಕರ್ತರ ಆರೋಗ್ಯದ ಕುರಿತು ಚಿಂತಿಸಿ ಇಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಿದೆ, ಅದರಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳೊಂದಿಗೆ ಇಲ್ಲಿಗೆ ಆಗಮಿಸಿದೆ ಎಂದರು.
ಪ್ರತಿ ಪತ್ರಕರ್ತರು ತಪಾಸಣೆಗೆ ಒಳಗಾಗಿ, ವೈದ್ಯರ ಸಲಹೆ ಪಾಲಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ,ಮಣಿಪಾಲ್ ಆಸ್ಪತ್ರೆ ಒದಗಿಸಿರುವ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿ ಈಗಾಗಲೇ ಪತ್ರಕರ್ತರಿಗೆ ಕೋವಿಡ್ ಸಂದರ್ಭದಲ್ಲಿ ಜೀವನ ನಿರ್ವಹಣೆ ಕುರಿತು ಅರಿವು ಮೂಡಿಸಿದೆ ಎಂದರು.
ಜತೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಮುಂದೆ ಬಂದಿದೆ, ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ಜಿಲ್ಲೆಯ ಪತ್ರಕರ್ತರ ಕುರಿತು ಹೊಂದಿರುವ ಕಾಳಜಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಯುವಕರಲ್ಲಿಹೆಚ್ಚುಹೃದಯಸಮಸ್ಯೆ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಡಾ.ಶ್ರೀಧರ್, ಹಿರಿಯರಿಗೆ ಹೃದಯ ಸಮಸ್ಯೆ ಸಾಮಾನ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.


ವಿಶ್ರಾಂತಿ ರಹಿತ ಜೀವನ, ಕೆಲಸದಲ್ಲಿನ ಒತ್ತಡ, ಜೀವನ ಶೈಲಿ, ಆಹಾರ ಪದ್ದತಿ, ಧೂಮಪಾನ, ಮದ್ಯಪಾನಕ್ಕೆ ದಾಸರಾಗುವುದು ಇವೆಲ್ಲವೂ ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ಪ್ರಮುಕ ಕಾರಣ ಎಂದು ತಿಳಿಸಿದರು.
ನಿಯಮಿತ ವ್ಯಾಯಾಮ ಮಾಡಿ, ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರದಿಂದ ದೂರವಿರಿ, ದುಶ್ಚಟಗಳನ್ನು ಬಿಡಿ, ಯೋಗ, ಧ್ಯಾನ, ಉತ್ತಮ ಆಹಾರ ಪದ್ದತಿಯ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಹೃದಯ ಸಂಬಂಧಿ ಸಮಸ್ಯೆಗಳು ಎದುರಾದಾಗ ವಿಳಂಬ ಮಾಡದಿರಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ, ನಿಮ್ಮ ಮನೆಯವರಿಗೂ ಈ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತವಾಗಿ ಇಸಿಜಿ ಪರೀಕ್ಷೆ, ಟ್ರೆಡ್ ಮಿಲ್ ಟೆಸ್ಟ್, ಯಾದೃಚ್ಛಿಕ ರಕ್ತ ಸಕ್ಕರೆ ಪರೀಕ್ಷೆ, ಬಿಪಿ ಚೆಕ್ ಮಾಡಿದ ವೈದ್ಯರು ಆಪ್ತಸಮಾಲೋಚನೆ ನಡೆಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ಹಿರಿಯ ಪತ್ರಕರ್ತರಾದ ಎಂ.ಜಿ ಪ್ರಭಾಕರ, ಸಿ.ಎಂ.ಮುನಿಯಪ್ಪ, ಪಾ.ಶ್ರೀ. ಅನಂತರಾಮ್, ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್, ಬಿ.ಸುರೇಶ್, ಕೆ.ಬಿ ಜಗದೀಶ್, ರಾಜೇಂದ್ರ, ರವಿ, ಎನ್.ಶಿವಕುಮಾರ್, ಪ್ರಕಾಶ್ ಮಾಮಿ, ಬಾಬಾ, ಸಿ.ಜಿ.ಮುರಳಿ, ಕೆ.ಆರ್ ಹರೀಶ್‍ಬಾಬು, ರಾಜೇಂದ್ರವೈದ್ಯ, ಹೆಚ್.ಎಲ್ ಸುರೇಶ್, ಸೇರಿದಂತೆ ವಿವಿಧ ತಾಲ್ಲೂಕುಗಳ ನೂರಾರು ಪತ್ರಕರ್ತರು ಆಗಮಿಸಿ ತಪಾಸಣೆ ಮಾಡಿಸಿಕೊಂಡರು.