


ಕುಂದಾಪುರ,ಮಾ.2: ವಿಶ್ವ ಶ್ರವಣ ದಿನದ ಅಂಗವಾಗಿ ಮಾರ್ಚ್ 2 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಹಾಗೂ ಔಟ್ರೀಚ್ ಸೇವಾ ಕೇಂದ್ರ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇವರ ಸಯುಕ್ತ ಆಶ್ರಯದಲ್ಲಿ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಉಚಿತ ಶ್ರವಣ ಪರೀಕ್ಷೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ. ರೋಬರ್ಟ್ ರೆಬೆಲ್ಲೋ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪ್ರಾಥಮಿಕ ಹಂತದಲ್ಲಿ ಶ್ರವಣದೋಷವನ್ನು ಪತ್ತೆ ಹಚ್ಚಿ ವಾಕ್ ಶ್ರವಣ ಸಾಧನವನ್ನು ಅಳವಡಿಸುವುದು. ಯಾವ ಮಗುವು ಶ್ರವಣದೋಷದಿಂದ ಬಳಲಬಾರದು. ಕಿವಿಯ ರಕ್ಷಣೆ ನಮ್ಮ ಹೊಣೆ. ಕಿವಿಯ ಒಳಗೆ ಯಾವುದೇ ವಸ್ತುಗಳನ್ನು ಬಳಸಬೇಡಿ ಎಂದರು. ಕಾರ್ಯಕ್ರಮದ ಅತಿಥಿಗಳಾದ ಡಾ. ವೀಣಾ ಪಿ ಎಸ್ ಹಿರಿಯ ತಜ್ಞೆ ಕುಂದಾಪುರ ಆಸ್ಪತ್ರೆ ಇವರು ಮಾತನಾಡಿ ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಬೇಕಾದರೆ ಶ್ರವಣಶಕ್ತಿ ಅವಶ್ಯಕವಾಗಿದೆ. ಶ್ರವಣಶಕ್ತಿ ರಕ್ಷಿಸಿಕೊಳ್ಳುವುದು ಎಲ್ಲರ ಹೊಣೆ ಎಂದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ವೇದಿಕೆಯಲ್ಲಿ ಉಪಸ್ಥಿರಿರುವ ಎಲ್ಲರನ್ನು ಸ್ವಾಗತಿಸಿದರು. ಮಾತಿನ ತಜ್ಞೆ ಡಾ. ಗಾಯತ್ರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಕಿವಿಯ ತಜ್ಞೆ ಡಾ. ಸುಪ್ರಿಯ ಉಪಸ್ಥಿತರಿದ್ದರು. ಶಿಕ್ಷಕರಾದ ಅಶೋಕ್ ದೇವಾಡಿಗ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಉಚಿತ ಶ್ರವಣ ಪರೀಕ್ಷೆ ನಡೆಸಲಾಯಿತು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.






