ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಸಂಪಾದಕರು : ಬರ್ನಾಡ್ ಡಿ’ಕೋಸ್ತಾ
ಕೋಲಾರ:- `ಸೋಷಿಯಲ್ ಇಮ್ಮರ್ಶನ್ ಪ್ರೋಗ್ರಾಂ’ ನಡಿ ಸಮುದಾಯದ ಅಗತ್ಯತೆಗಳಿಗೆ ವಿದ್ಯಾರ್ಥಿಗಳನ್ನು ಸಂವೇದನಾ ಶೀಲಗೊಳಿಸುವ ಮತ್ತು ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನವಾಗಿ ತಾಲ್ಲೂಕಿನ ವಕ್ಕಲೇರಿ ಹಾಗೂ ಶೆಟ್ಟಿಕೊತ್ತನೂರು ಗ್ರಾಮಗಳಲ್ಲಿ ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶೀಬಿರದಲ್ಲಿ 450ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದು, ಮನೆಮನೆಗೂ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಅನನ್ಯ ಉಪಕ್ರಮವನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.
ರಾಜ್ಯದ ಹೆಸರಾಂತ ಆಸ್ಪತ್ರೆಗಳ ವೈದ್ಯರಾದ ಡಾ.ಕೆ.ಜ್ಯೋತಿ ಲಕ್ಷ್ಮಿ, ಕ್ಲೌಡ್ ನೈನ್ ಆಸ್ಪತ್ರೆಯ ಡಾ.ಎಸ್.ಪುಷ್ಪಲತಾ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ನಿದಾ, ಖ್ಯಾತ ತಜ್ಞೆ ಡಾ.ರಶ್ಮಿ ಮತ್ತಿತರರು ಆರೋಗ್ಯ ತಪಾಸಣೆ ನಡೆಸಿದರು.
ಶಿಬಿರದಲ್ಲಿ ಎತ್ತರ ಮಾಪನ, ತೂಕ ಮಾಪನ, ರಕ್ತದೊತ್ತಡ, ನಾಡಿ ತಪಾಸಣೆ, ಚರ್ಮ, ಕೂದಲು ಮತ್ತು ಉಗುರುಗಳ ತಪಾಸಣೆಯಂತಹ ಸಾಮಾನ್ಯ ತಪಾಸಣೆ ಸೇರಿದಂತೆ ಉಚಿತ ಪರೀಕ್ಷೆಗಳು ಲಭ್ಯವಿದ್ದವು. ಮೂಗು,ಗಂಟಲು ತಜ್ಞರು ಹೃದಯ, ಶ್ವಾಸಕೋಶ, ಹೊಟ್ಟೆ, ಕೈಕಾಲುಗಳನ್ನು ಪರೀಕ್ಷಿಸಿ, ಗರ್ಭಿಣಿಯರಿಗೆ ಡಾಪ್ಲರ್ ಮೂಲಕ ಭ್ರೂಣದ ಹೃದಯ ಪರೀಕ್ಷೆ , ಅದರಂತೆ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಉಚಿತ ಔಷಧ ಮತ್ತು ಪ್ರೋಟೀನ್ ಪೌಡರಗಳನ್ನು ನೀಡಲಾಯಿತು.
ವಿದ್ಯಾರ್ಥಿಗಳು ವಕ್ಕಲೇರಿ ಮತ್ತು ಶೆಟ್ಟಿಕೊಟ್ನೂರಿನ ಪ್ರತಿ ಮನೆಗೆ ಭೇಟಿ ನೀಡಿ ಕರಪತ್ರಗಳ ಮೂಲಕ ಪ್ರಚಾರ ನಡೆಸಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಜತೆಗೆ ಸಮೀಕ್ಷೆ ನಡೆಸಿ ಗ್ರಾಮಸ್ಥರ ಇತರ ಸಮಸ್ಯೆಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು.
ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರಕ್ಕೆ ಸುಮಾರು 250 ಮಂದಿ ಭೇಟಿ ನೀಡಿದ್ದರು. ಶೆಟ್ಟಿಕೊತ್ತನೂರಿನಲ್ಲಿ ನಡೆದ ಶಿಬಿರಕ್ಕೆ 220 ಮಂದಿ ಆಗಮಿಸಿ ತಪಾಸಣೆಗೆ ಒಳಗಾದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು.
ಈ ಶಿಬಿರಕ್ಕೆ ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನ ಅಧ್ಯಾಪಕರಾದ ಬಿನಿತಾ ವರ್ಥಕ್, ಕುಮಾರಿ ಝಿನಿಯ ನನ್ರಾ ಮತ್ತು ಆಡಿ. ವಿಠ್ಠಲ ರಂಗನ್ ನೇತೃತ್ವ ವಹಿಸಿದ್ದರು.