

ಮೈಸೂರು: ಅಡುಗೆ ಅನಿಲ ಸೋರಿಕೆಯಾಗಿ ಮಲಗಿರುವಾಗಲೇ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ ಆಘಾತಕಾರಿ ಘಟನೆ ಅರಮನೆ ನಗರಿಯ ಯರಗನಹಳ್ಳಿಯಲ್ಲಿ ನಡೆದಿದೆ.
ಕುಮಾರಸ್ವಾಮಿ (45) ಮಂಜುಳಾ (39) ದಂಪತಿ ಮತ್ತವರ ಮಕ್ಕಳಾದ ಅರ್ಚನಾ (19) ಹಾಗೂ ಸ್ವಾತಿ (17) ಮೃತಪಟ್ಟವರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಕುಟುಂಬವು ಮೈಸೂರಿನಲ್ಲಿ ನೆಲೆಸಿದ್ದರು, ಬಟ್ಟೆ ಇಸ್ತ್ರಿ ಮಾಡುವ ಕೆಲಸವನ್ನು ದಂಪತಿ ಮಾಡುತ್ತಿದ್ದರು.
ಎರಡು ದಿನಗಳ ಹಿಂದೆ ಮೇ.19 ರಂದು ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ನಿನ್ನೆ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿಯೇ ಎಲ್ಲರೂ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಿಂದ ಯಾರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು ಹೋಗಿ ಬಾಗಿಲು ಮುರಿದು ನೋಡಿದಾಗ ಇಡೀ ಕುಟುಂಬ ಮಲಗಿದ್ದಲ್ಲಿಯೇ ಸಾವಿನ ಮನೆ ಸೇರಿರುವುದು ಬೆಳಕಿಗೆ ಬಂದಿದೆ.
ಸಿಲಿಂಡರ್ನಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ, ಸಾವಿನ ಬಗ್ಗೆ ಕೆಲ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.