ಜಿಲ್ಲೆಯಲ್ಲಿ ಮತ್ತೆ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ – ಅರವಿಂದ ಲಿಂಬಾವಳಿ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ : ಜಿಲ್ಲೆಯಲ್ಲಿ 3 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ನಿಂದ ಕರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಮೇ 27 ರಂದು ಬೆಳಿಗ್ಗೆ 10.00 ಗಂಟೆಯಿಂದ ಮೇ 31 ರಂದು ಬೆಳಿಗ್ಗೆ 6.00 ಗಂಟೆಯವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ. ವೈದ್ಯಕೀಯ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ ಸಾರ್ವಜನಿಕರು ಸಹಕರಿಸಬೇಕು ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ ) ಸಿದ್ಧಪಡಿಸಿರುವ ಮೊಬೈಲ್ ಆಕ್ಸಿಜನ್ ಬ್ಯಾಂಕ್ ಬಸ್‌ಗೆ ಸಂಸದ ಎಸ್. ಮುನಿಸ್ವಾಮಿ ಹಾಗೂ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಅವರೊಂದಿಗೆ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಬಸ್ ನಿಲ್ಲಿಸಿ ಆಸ್ಪತ್ರೆಗೆ ನೇರವಾಗಿ ಬರುವ ಸೋಂಕಿತರಿಗೆ ಬೆಡ್ ಸಿಗುವವರೆಗೆ ಈ ಬಸ್‌ನಲ್ಲಿ ಆಕ್ಸಿಜನ್ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಈ ಬಸ್‌ನಲ್ಲಿ 6 ಆಕ್ಸಿಜನ್ ಸಿಲಿಂಡರ್‌ಗಳಿದ್ದು , ಅಗತ್ಯವಿದ್ದಲ್ಲಿ 1 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಸಚಿವರು ತುರ್ತು ಸಂದರ್ಭಗಳಲ್ಲಿ ಸೋಂಕಿತರನ್ನು ಗ್ರಾಮದಿಂದ ಆಸ್ಪತ್ರೆಗೆ ಕರೆತರುವ ಕಾರ್ಯವನ್ನೂ ಸಹ ಈ ಬಸ್‌ ನಿರ್ವಹಿಸಲಿದೆ ಎಂದು ತಿಳಿಸಿದರು . ಕುವೈತ್ ಸರ್ಕಾರದಿಂದ ಕಳುಹಿಸಿದಂತಹ 20 ಟನ್ ಆಕ್ಸಿಜನ್‌ನ್ನು ರಾಜ್ಯ ಸರ್ಕಾರ ಕೋಲಾರ ಜಿಲ್ಲೆಗೆ ನೀಡಿದೆ. ಜಿಲ್ಲೆಗೆ ಆಕ್ಸಿಜನ್ ಕೊರತೆ ಇರುವುದಿಲ್ಲ ಎಂದು ಸಚಿವರು ಹೇಳಿದರು. 1853 ಗ್ರಾಮಗಳಲ್ಲಿ 826 ಗ್ರಾಮಗಳು ಕರೋನಾ ಮುಕ್ತವಾಗಿರುವುದು ಸಂತೋಷದಾಯಕವಾಗಿದೆ . ಉಳಿದ ಹಳ್ಳಿಗಳು ಕರೋನಾ ಮುಕ್ತವಾಗಲು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳವರೆಗೆ ಕರೋನಾ ಪ್ರಕರಣಗಳು ಇಲ್ಲದ ಗ್ರಾಮ ಪಂಚಾಯಿತಿ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಶೇ . 100 ರಷ್ಟು ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸುವ ಗ್ರಾಮ ಪಂಚಾಯತಿಯನ್ನು ಗುರುತಿಸಿ ಸರ್ಕಾರದ ವತಿಯಿಂದ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.


ನಗರ ಪ್ರದೇಶದಲ್ಲಿ ಹೋಂ ಐಸೋಲೇಷನ್‌ನಲ್ಲಿರುವ 18-45 ವರ್ಷ ವಯಸ್ಸಿನ ಸೋಂಕಿತರು ಹೊರಗಡೆ ಓಡಾಡುತ್ತಾರೆ. ನಿಯಮ ಪಾಲಿಸಲು ವಿಫಲರಾದರೆ ಅವರನ್ನು ಪೊಲೀಸರ ಸಹಾಯದಿಂದ ಕೋವಿಡ್ ಕೇರ್ ಸೆಂಟರ್‌ಗೆ ಅಧಿಕಾರಿಗಳು ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು . ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಉತ್ತಮ ಸೌಲಭ್ಯಗಳಿದ್ದು , ಸೋಂಕಿತರು ಅಲ್ಲಿಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಲಾಕ್‌ಡೌನ್ ವೇಳೆ ವೈದ್ಯಕೀಯ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾರಿಕೆಗಳಿಗೆ ಮಾತ್ರ ಜಿಲ್ಲಾಧಿಕಾರಿಗಳ ಅನುಮತಿಯ ಮೇಲೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದ ಸಚಿವರು ಎ.ಪಿ.ಎಂ.ಸಿ.ಗಳು ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧವಿಲ್ಲ , ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಹಕರಿಸಬೇಕು ಎಂದು ಕೋರಿದರು .
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ || ಆರ್ ರ್.ಸೆಲ್ವಮಣಿ , ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್ . ಎಂ . ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ | ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.