ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಅಖಿಲಭಾರತ ಕಾಂಗ್ರೆಸ್ ಸಮಿತಿಯಿಂದ ರಾಜಾಸ್ತಾನ್ ರಾಜ್ಯದ ಉದಯಪುರದಲ್ಲಿ ಮೇ13 ರಿಂದ 15 ರವರೆಗೂ ನಡೆಯುತ್ತಿರುವ ಚಿಂತನ-ಮಂಥನಾ ಶಿಬಿರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಿದ್ದರು.
ಅವರು ಇದಕ್ಕೂ ಮುನ್ನಾ ಶುಕ್ರವಾರ ಬೆಳಗ್ಗೆ ರಾಜಸ್ತಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರಲ್ಲದೇ ದೇಶದ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದರು.
ಮೂರು ದಿನಗಳ ಈ ಚಿಂತನಾ ಮಂಥನಾ ಸಭೆಯಲ್ಲಿ ಪಕ್ಷದ ಬೆಳವಣಿಗೆ, ಮುಂದಿನ ಚುನಾವಣೆಗಳನ್ನು ಎದುರಿಸಲು ಸಿದ್ದತೆ, ಪಕ್ಷದ ನಾಯಕತ್ವ ಮತ್ತಿತರ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಯಲಿದ್ದು, ಸಿಡಬ್ಲೂಸಿ ಖಾಯಂ ವಿಶೇಷ ಆಹ್ವಾನಿತರೂ ಆಗಿರುವ ಕೆ.ಎಚ್.ಮುನಿಯಪ್ಪ ಪಾಲ್ಗೊಂಡಿದ್ದಾರೆ.
ರಾಜ್ಯದಿಂದ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ರಾಜ್ಯ ಸಭಾ ಸದಸ್ಯ ನಾಸೀರ್ ಅಹಮದ್, ಮಾಜಿ ಸಚಿವ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಸತೀಶ್‍ಜಾರಕಿಹೋಳಿ, ಪ್ರಕಾಶ್ ರಾತೋಡ್, ಶಾಸಕ ಭೀಮಾನಾಯಕ್ ಮತ್ತಿತರರಿದ್ದರು.