ಸೇವೆಯ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು ಎಂದು ಮಾಜಿ ಸಂಸದ ಡಾ. ವೆಂಕಟೇಶ್

ಶ್ರೀನಿವಾಸಪುರ: ಸೇವೆಯ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು ಎಂದು ಮಾಜಿ ಸಂಸದ ಡಾ. ವೆಂಕಟೇಶ್ ಹೇಳಿದರು.
ಪಟ್ಟಣದ ವೆಂಕಟೇಶ್ವರ ಸಭಾಂಗಣದಲ್ಲಿ ಎಎಪಿ ವತಿಯಿಂದ ಶನಿವಾರ ಏರ್ಪಡಿಸಿದ್ದ, ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ರಚನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ತೆರಿಗೆದಾರರಾಗಿರುವ ಬಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಗಳಿಕೆ ತಂತ್ರ ಒಳಗೊಂಡ ಪ್ರಣಾಳಿಕೆ ಬಿಡುಗಡೆಗೊಳಿಸುವುದು ಸಾಮಾನ್ಯ. ಅಂಥ ಪ್ರಣಾಳಿಕೆಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರಬರುತ್ತವೆ. ಆದರೆ ಎಎಪಿ, ಸಾರ್ವಜನಿಕರಿಂದ ಸಮಸ್ಯೆ ಅರಿತುಕೊಂಡು, ಅವರ ಸಮಸ್ಯೆ ಪರಿಹಾರಕ್ಕೆ ಪೂರಕವಾದ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಇಡೀ ದೇಶಕ್ಕೆ ಒಂದು ಪ್ರಣಾಳಿಕೆ ತರುವುದರಿಂದ ಪ್ರಯೋಜನವಾಗುವುದಿಲ್ಲ. ಬೇರೆ ಬೇರೆ ಕಡೆ ಬೇರೆ ಬೇರೆ ಸಮಸ್ಯೆಗಳಿರುವತ್ತವೆ. ಅವುಗಳ ನಿವಾರಣೆ ಆಗಬೇಕಾದರೆ ಅಲ್ಲಿನ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅಗತ್ಯಗಳ ಬಗ್ಗೆ ಅಲ್ಲಿನ ಜನರೇ ಹೇಳಬೇಕಾಗುತ್ತದೆ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅದಕ್ಕೆ ಸ್ಥಳೀಯ ಮಹತ್ವದ ಯೋಜನೆಗಳ ಅನುಷ್ಠಾನದ ಕೊರತೆಯೇ ಕಾರಣ ಎಂದು ಹೇಳಿದರು.
ರಾಜ್ಯ ಎಎಪಿ ಜಂಟಿ ಕಾರ್ಯದರ್ಶಿ ಸುರೇಶ್ ಮಾತನಾಡಿ, ಎಎಪಿ ಪ್ರಣಾಳಿಕೆ ರಚನೆ ಪಕ್ಷಾತೀತವಾಗಿದ್ದು, ಯಾವುದೇ ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಪ್ರಕ್ತಿಯೆಯಲ್ಲಿ ಭಾಗವಹಿಸಬಹುದು. ಜನರಿಗೆ ಅಭಿವೃದ್ಧಿಗೆ ಸಂಬಂಧಿಸಿದ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ದೆಹಲಿ ಹಾಗೂ ಪಂಜಾಬ್ ಮಾದರಿಯಲ್ಲಿ ರಾಜ್ಯ ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಮತದಾರರು ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.
ಜಿಲ್ಲಾ ಎಎಪಿ ಅಧ್ಯಕ್ಷ ವಿಜಯ್ ಕುಮಾರ್, ರಾಜ್ಯ ಎಎಪಿ ಜಂಟಿ ಕಾರ್ಯದರ್ಶಿ ರಮೇಶ್ ಮುಖಂಡ ವಿ.ರಮೇಶ್ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಣಾಳಿಕೆ ತಯಾರಿಕೆ ವಿಧಾನ ಕುರಿತು ಸಾರ್ವಜನಿಕರಿಗೆ ತರಬೇತಿ ನೀಡಲಾಯಿತು. ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.