ಶ್ರೀನಿವಾಸಪುರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಎಲ್ಲ ವರ್ಗದ ಜನರೂ ಅವರನ್ನು ಬೆಂಬಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ, ತಾಲ್ಲೂಕು ವಾಲ್ಮೀಕಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೈಗೊಂಡ ನಿರ್ಧಾರದಿಂದಾಗಿ ಬಡವರು, ಅನ್ನ ತಿನ್ನುವಂತಾಗಿದೆ. ಬಡವರಿಗೆ ಅಕ್ಕಿ ನೀಡಿದ ಪರಿಣಾಮವಾಗಿ ಹಸಿವು ಮುಕ್ತ ಕರ್ನಾಟಕದ ಕನಸು ನನಸಾಗಿದೆ. ಬಡವರ ಪರ ಕಾಳಜಿ ಇರುವ ಸಿದ್ದರಾಮಯ್ಯ ಅವರನ್ನು ಆರಿಸಿ ಕಳುಹಿಸಿದರೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ರಾಮಾಯಣ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣೀಯರು. ಅವರು ರಚಿಸಿದ ಮಹಾಕಾವ್ಯ ನಿತ್ಯ ನೂತನವಾಗಿದೆ. ವಾಲ್ಮೀಕಿ ಸಮುದಾಯ ಸಂವಿಧಾನ ನೀಡಿರುವ ಹಕ್ಕುಗಳಿಗಾಗಿ ಸಾಂಘಿಕ ಪ್ರಯತ್ನ ನಡೆಸಬೇಕು. ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ತಮ್ಮ ಕೃತಿಯ ಮೂಲಕ ಸಮಾಜದ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಕಾವ್ಯ ಹಲವು ಶತಮಾನಗಳಿಂದ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಸಮಾಜ ಕಲ್ಯಾಣ ಅಧಿಕಾರಿ ಶಿಕುಮಾರ್, ಮುಖಂಡರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಅಂಬರೀಶ್, ದಿಂಬಾಲ ಅಶೋಕ್, ಎನ್.ಹನುಮೇಶ್, ನರೇಶ್, ಎಚ್.ಎನ್.ಆಂಜಿನಪ್ಪ, ರೋಣೂರು ಚಂದ್ರಶೇಖರ್, ಕೆ.ನಾಗರಾಜ ನಾಯಕ್, ರಾಮಕೃಷ್ಣ, ವಿಠ್ಠಲ್ ನಾರಾಯಣ್, ಕೆ.ಕೆ.ಮಂಜು, ಸರಸ್ವತಮ್ಮ, ರಾಮಾಂಜಮ್ಮ ಇದ್ದರು.
ಮೆರವಣಿಗೆ: ಪಟ್ಟಣದ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಹನಗಳಲ್ಲಿ ತರಲಾಗಿದ್ದ ವಾಲ್ಮೀಕಿ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಜನರು ಭಾಗವಹಿಸಿದ್ದರು.