ಶ್ರೀನಿವಾಸಪುರ: ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ತಾಲ್ಲೂಕಿನ ಕರಿಪಲ್ಲಿ ಕರಿಪಲ್ಲಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚರತ್ನ ಯೋಜನೆ ಸಮಾಜದ ಎಲ್ಲ ಸಮುದಾಯದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ರೈತ ಮುಖಿಯಾಗಿ ಉಳಿದಿಲ್ಲ. ಎಚ್.ಡಿ.ಕುಮಾರಸ್ವಾಮಿ 14 ತಿಂಗಳು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ರೈತರ ರೂ.25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದರೆ ನಾಗರಿಕರಿಗೆ ನೀಡಲಾಗುತ್ತಿರುವ ಎಲ್ಲ ಪಿಂಣಿಗಳ ಮೊತ್ತ ಹೆಚ್ಚಿಸಲಾಗುವುದು ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ನಾನು ನಾಲ್ಕು ಬಾರಿ ಶಾಸಕನಾಗಿದ್ದೆ. ಏನಾದರೂ ಅಭಿವೃದ್ಧಿಯಾಗಿದ್ದರೆ, ಅದು ನನ್ನ ಕಾಲದಲ್ಲಿ ಮಾತ್ರ. ಶಾಸಕ ಕೆ.ಆರ್.ರಮೇಶ್ ಕುಮಾರ್ ತಾಲ್ಲೂಕನ್ನು ಗುಡಿಸಲು ಮುಕ್ತಗೊಳಿಸಿರುವದಾಗಿ ಹೇಳುತ್ತಿದ್ದಾರೆ. ಅವರ ಹುಟ್ಟೂರಾದ ಅಡ್ಡಗಲ್ನಲ್ಲಿ ಇನ್ನೂ ಗುಡಿಸಲುಗಳು ಜೀವಂತವಾಗಿವೆ. ತಾಲ್ಲೂಕಿನಲ್ಲಿ ಮನೆಗಳ ವಿತರಣೆಯಲ್ಲಿ ಪಕ್ಷಪಾತ ಮಾಡಲಾಗಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಕೃಷಿ ಕೊಳವೆ ಬಾವಿ ಮಂಜೂರು ಮಾಡಿಸಿಲ್ಲ. ಕೇಂದ್ರ ಸಾರ್ಕಾರ ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್ಗೆ ನೀಡುವ ಹಣವನ್ನು ತಮ್ಮ ಕಿಸೆಯಿಂದ ನೀಡಿದಂತೆ ಬಿಂಬಿಸಿ, ಸ್ತ್ರೀ ಶಕ್ತಿ ಸಂಘಗಳಿಗೆ ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಪಂಚರತ್ನ ಯೋಜನೆ ಕುರಿತು ಮತದಾರರಿಗೆ ತಿಳಿಸಬೇಕು. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಂಡಪಲ್ಲಿ ಕೃಷ್ಣಾರೆಡ್ಡಿ, ಶ್ರೀನಿವಾಸ್, ಮುಖಂಡರಾದ ಕೆ.ವಿ.ಶಿವಾರೆಡ್ಡಿ, ಸದಾಶಿವ, ಅಮರನಾಥ್, ರಮೇಶ್, ನಾರಾಯಣಸ್ವಾಮಿ, ಗಣೇಶ್, ಆನಂದ್, ರೆಡ್ಡಪ್ಪ ಇದ್ದರು.