





ತಾಯಲೂರು; ನ.23: ಚೆನ್ನೈ ಕಾರಿಡಾರ್ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನಿ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರ ಕಳೆದುಕೊಂಡಿರುವ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ನೊಂದ ರೈತರಿಂದ ಜಿಲ್ಲಾಡಳಿತಕ್ಕೆ ಆಗ್ರಹ.
ಭೂಮಿ ಕಳೆದುಕೊಂಡ ಗಡಿ ಭಾಗದ ಚುಕ್ಕನಹಳ್ಳಿ ವ್ಯಾಪ್ತಿಯ ಕಾರಿಡಾರ್ ರಸ್ತೆಯ ಮೇಲೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಪರಿಹಾರಕ್ಕಾಗಿ ಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯನ್ನು ತಾಲೂಕು ಆಡಳಿತಕ್ಕೆ ನೊಂದ ರೈತ ವೆಂಕಟೇಶ್, ರಾಮೇಗೌಡ ನೀಡಿದರು.
ರಸ್ತೆ ಅಭಿವೃದ್ಧಿಗೆ ನೂರಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ಗಡಿ ಭಾಗದ ಚುಕ್ಕನಹಳ್ಳಿ, ಏತೋರನಹಳ್ಳಿ ಮತ್ತಿತರ ಗ್ರಾಮಗಳ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡುತ್ತಿರುವುದಕ್ಕೆ ರೈತರ ತಕರಾರಿಲ್ಲ. ಆದರೆ, ಜಮೀನಿಗೆ ಕಡಿಮೆ ಮೊತ್ತದ ಪರಿಹಾರ ನೀಡುವ ಜೊತೆಗೆ ಜಮೀನಿನಲ್ಲಿದ್ದ ತೆಂಗು ಸೀಬೆ ಹುಣಸೆ ಮಾವು ಮರಗಳನ್ನು ಕಳೆದುಕೊಂಡಿರುವ ರೈತರಿಗೆ ನೀಡಬೇಕಾದ ಕೋಟ್ಯಾಂತರ ರೂಪಾಯಿ ಪರಿಹಾರ ಪಿ ನಂಬರ್ ಜಮೀನು ಎಂದು ತಡೆ ಹಿಡಿದಿರುವುದುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆರೋಪ ಮಾಡಿದರು.
60 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿಗೆ ತಾಲೂಕು ಆಡಳಿತದಿಂದ ಸಾಗುವಳಿ ಪಹಣಿ ಖಾತೆ ಎಲ್ಲಾ ದಾಖಲೆಗಳು ನೀಡಿರುವುದನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಅದೇ ದಾಖಲೆಗಳನ್ನು ನೀಡಿದ್ದಾರೆ. ಪಿ ನಂಬರ್ ದುರಸ್ಥಿ ಮಾಡುವಂತೆ ಕಂದಾಯ ಸಚಿವರಿಗೆ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ ಹತ್ತಾರು ವರ್ಷಗಳಿಂದ ಹೋರಾಟಗಳ ಮುಖಾಂತರ ಒತ್ತಾಯ ಮಾಡುತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೂರಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಪಿ ನಂಬರ್ ದುರಸ್ಥಿ ಮಾಡಲು ತಾಲೂಕು ಕಚೇರಿಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಎಲ್ಲಾ ದಾಖಲೆಗಳ ಕಡತ ಸರಿಯಿದ್ದರೂ ನೂರೊಂದು ನೆಪ ಹೇಳಿ ಮೂಲೆಗುಂಪಿಗೆ ಕಡತ ಬಿಸಾಕುವ ಅಧಿಕಾರಿಗಳು ದಲ್ಲಾಳಿಗಳ ಮುಖಾಂತರ ಒಂದು ಎಕರೆಗೆ ಕನಿಷ್ಠ 2 ಲಕ್ಷದಿಂದ 5 ಲಕ್ಷದವರೆಗೆ ಲಂಚ ನಡೆಯುತ್ತದೆ. ರಿಯಲ್ ಎಸ್ಟೇಟ್ ದಂಧೆಕೋರರಿಗೆ 24 ಗಂಟೆಯಲ್ಲಿ ಪಿ ನಂಬರ್ ದುರಸ್ಥಿ ಮಾಡಿ ಬಡವರನ್ನು ನಿರ್ಲಕ್ಷ್ಯ ಮಾಡುವ ದಂಧೆಗೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.
ಗಡಿ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದು ಅದರಲ್ಲೂ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಜಮೀನಿಲ್ಲ. ಆ ಜಮೀನಿನಲ್ಲಿ ಬೆಳೆದಿದ್ದ ಮಾವು ಹುಣಸೆ ಸೀಬೆ ತೆಂಗು ಮರಗಳ ಫಸಲನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಈಗ ರಾಮನಗರದ ಆರ್ ಸಿ ಆದೇಶ ನೆಪದಲ್ಲಿ ಪಿ ನಂಬರ್ ದುರಸ್ಥಿಯಾಗುವವರೆಗೂ ಮರಗಳಿಗೆ ಪರಿಹಾರ ನೀಡಬಾರದು ಎಂಬ ಆದೇಶ ರೈತ ವಿರೋಧಿ ಧೋರಣೆಯಾಗಿದೆ ಎಂದು ಆರೋಪ ಮಾಡಿದರು.
ಹಾಗಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮರಗಳ ಪರಿಹಾರ ಹಣವನ್ನು ಬಿಡುಗಡೆ ಮಾಡಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಖಾತೆಯಲ್ಲಿ 11.5 ಕೋಟಿ ಹಣವಿದ್ದು, ಈ ಕೂಡಲೇ ಪಿ ನಂಬರ್ ನೆಪ ಹೇಳದೆ ಪರಿಹಾರವನ್ನು ಬಿಡುಗಡೆ ಮಾಡಿ ನಂತರ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರಿಗೆ ತೊಂದರೆಯಾಗದ ರೀತಿ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಶೋಭಿತಾ ಅವರು ಪಿ ನಂಬರ್ ದುರಸ್ಥಿ ಬಗ್ಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ತಡೆ ಹಿಡಿದಿರುವ ಬಗ್ಗೆ ಸಹ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ಜುಬೇದ್ ಪಾಷ, ವಿಶ್ವನಾಥ್, ಜನಾರ್ಧನ್, ರಾಜಣ್ಣ, ಕುಮಾರ್, ಮಂಗಮ್ಮ, ಶಿವಣ್ಣ, ವೆಂಕಟೇಶಪ್ಪ, ಸೀನಪ್ಪ, ಸುಬ್ರಮಣಿ, ವೆಂಕಟರಾಮಪ್ಪ, ರಾಮಸಾಗರ ವೇಣು, ಸಂದೀಪ್ರೆಡ್ಡಿ, ಸಂದೀಪ್ಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್ ಮುಂತಾದವರಿದ್ದರು.