ಕೋಲಾರ; ಅ.7: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ವಿಶೇಷ
ತಂಡ ರಚನೆ ಮಾಡಿ ಬಡ ರೈತ ಕೂಲಿಕಾರ್ಮಿಕರ ಮಾಂಗಲ್ಯ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ
ರೈತಸಂಘದಿಂದ ಅಬಕಾರಿ ಆಯುಕ್ತರಿಗೆ ಗಿಡ ನೀಡಿ ಸ್ವಾಗತಿಸಿ, ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಕಿಲೋಮೀಟರ್ಗಟ್ಟಲೆ ಅಲೆದಾಡಿದರೂ ಕುಡಿಯಲು ಹನಿ ನೀರಿಗೆ ಆಹಾಕಾರ
ಇದೆಯೇ ಹೊರತು ಜಿಲ್ಲಾದ್ಯಂತ ಯಾವುದೇ ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿ
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಡಾಬಾಗಳಲ್ಲಿ ದಿನದ 24 ಗಂಟೆ ಮದ್ಯ ಮಾರಾಟ
ನಿರಂತರವಾಗಿ ನಡೆಯುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ನೆಪ
ಮಾತ್ರಕ್ಕೆ ದಾಳಿ ಮಾಡಿ ಕೆಲಸಕ್ಕೆ ಬಾರದ ಪಿಟ್ಟಿ ಕೇಸ್ ಗಳನ್ನು ಹಾಕಿ
ಕೈತೊಳೆದುಕೊಳ್ಳುತ್ತಿದ್ದಾರೆಂದು ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಅಬಕಾರಿ
ಆಯುಕ್ತರಿಗೆ ಜಿಲ್ಲೆಯ ಅಕ್ರಮ ಮದ್ಯ ಮಾರಾಟದ ಬಗ್ಗೆ ದಾಖಲೆಗಳ ಸಮೇತ ವಿವರಿಸಿದರು.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆಮನೆಗೂ ನಲ್ಲಿ ಮೂಲಕ ನೀರು
ಸರಬರಾಜು ಮಾಡುವ ಬದಲು ಸರಕಾರ ನಡೆಸಲು ಹಣವಿಲ್ಲದ ಬಡವರ ಮಾಂಗಲ್ಯದ ಹಾಗೂ ಕುಟುಂಬದ
ಜೊತೆ ಚೆಲ್ಲಾಟವಾಡುವ ಬದಲು ಮನೆಮನೆಗೆ ನೀರಿನ ಬದಲು ಮದ್ಯವನ್ನು ಸರಬರಾಜು ಮಾಡಿ
ಪುಣ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರ ನಡೆಯಬೇಕಾದರೆ ಹಣದ ಮೂಲಗಳು ಬೇಕು. ಹಣದ ಮೂಲಗಳು ಬೇಕಾದರೆ ಜಿಲ್ಲೆಯ ಅಬಕಾರಿ
ವ್ಯಾಪಾರ ಹೆಚ್ಚಾಗಬೇಕು. ವ್ಯಾಪಾರ ಹೆಚ್ಚಾಗಬೇಕಾದರೆ ಅಕ್ರಮವಾಗಿ ಮದ್ಯಮಾರಾಟಕ್ಕೆ
ಅವಕಾಶ ನೀಡಬೇಕು. ಇದರಿಂದ ಅಬಕಾರಿ ಆದಾಯ ಹೆಚ್ಚಾಗಿ ಬಡವರ ಹೊಟ್ಟೆ ಮೇಲೆ ತಣ್ಣೀರು
ಬಟ್ಟೆ ಹಾಕಿ ಬೆಳಗ್ಗೆಯಿಂದ ಸಂಜೆಯವರೆಗೆ ಕಷ್ಟಪಟ್ಟ ಹಣವನ್ನು ಹೆಂಡತಿ ಮಕ್ಕಳ ಕಡೆ
ತಿರುಗಿ ನೋಡದ ಮದ್ಯವ್ಯಸನಿಗಳು ಸಂಜೆ ವೇಳೆ ಅಬಕಾರಿ ಅಂಗಡಿಗೆ ದುಡಿದ ಹಣವನ್ನು ಇಟ್ಟು
ಖಾಲಿ ಕೈಯಲ್ಲಿ ಮನೆಗೆ ಬಂದು ಹೆಂಡತಿ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ
ಕೊಲೆಗಳು ನಡೆದಿರುವ ಮಟ್ಟಕ್ಕೆ ಅಬಕಾರಿ ಪ್ರಕರಣಗಳು ಸಂಭವಿಸುತ್ತಿದ್ದರೂ
ವಾಸ್ತವಾಂಶವನ್ನು ಸರ್ಕಾರಕ್ಕೆ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು
ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ಕಾರ್ಮಿಕ ರೈತ ಮಹಿಳೆ ಶೈಲಜಾ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ವಿಧಾನಸೌಧ
ಹಾಗೂ ಜಿಲ್ಲೆಯ ಕೆಡಿಪಿ ಸಭೆಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ರಾಜಾರೋಷದ
ಮಾತುಗಳನ್ನು ಹೇಳಿ ಪತ್ರಿಕಾ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿ ಆನಂತರ ಅಕ್ರಮ ಮದ್ಯ
ಮಾರಾಟ ನಿಯಂತ್ರಣ ಮಾಡದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ
ಮೌನವಾಗಿರುವುದಕ್ಕೆ ಕಾರಣವೇನು. ಅಲ್ಲಿದ್ದ ಧ್ವನಿ ಇಲ್ಲಿ ಎಲ್ಲಿ ಹೋಯಿತು.
ಡಾಬಾಗಳಲ್ಲಿ ನಿರಂತರವಾಗಿ ಮಾರಾಟವಾಗುತ್ತಿರುವ ದಂಧೆ ನಿಯಂತ್ರಿಸುವ ಅಧಿಕಾರಿಗಳ ಮೇಲೆ
ರಾಜಕಾರಣಿಗಳ ಒತ್ತಡವೇ ಎಂದು ಆಯುಕ್ತರನ್ನು ಪ್ರಶ್ನೆ ಮಾಡಿದರು.
ಕೂಲಿ ಮಾಡಿ ಹಾಗೂ ಖಾಸಗಿ ಸಾಲ ಪಡೆದು ಮಕ್ಕಳ ವಿದ್ಯಾಭ್ಯಾಸ ಹಿರಿಯ ಆರೋಗ್ಯಕ್ಕೆ ಹಣ
ಕೂಡಿಟ್ಟರೆ ಕೆಲಸ ಕಾರ್ಯ ಮಾಡದ ಕುಡಿತಕ್ಕೆ ದಾಸರಾಗಿರುವ ಮನೆಯ ಯಜಮಾನರು ಕೂಲಿ
ಹಣವನ್ನು ಸಾಲದ ಹಣವನ್ನು ಕಿತ್ತುಕೊಳ್ಳುವ ಜೊತೆಗೆ ಸರ್ಕಾರದಿಂದ ಉಚಿತವಾಗಿ ನೀಡುವ 2
ಸಾವಿರ, 3 ಕೆಜಿ ಅಕ್ಕಿ ಸಹ ಕಾಳಸಂತೆಯಲ್ಲಿ ಮಾರಾಟ ಮಾಡಿ ಕುಡಿದು ಬಂದು ಕುಟುಂಬದ
ಮರ್ಯಾದೆಯನ್ನು ತೆಗೆಯುತ್ತಿರುವ ಮದ್ಯವ್ಯಸನಿಗಳಿಂದ ಮಧ್ಯಮ ವರ್ಗದ ಕುಟುಂಬಗಳು
ಉಳಿಯಬೇಕಾದರೆ ಸರ್ಕಾರ ಮದ್ಯ ಮಾರಾಟ ಸಂಪೂರ್ಣವಾಗಿ ನಿμÉೀಧ ಮಾಡಿ ತಮ್ಮ ತಾಕತ್ತು
ತೋರಿಸಲಿ ಎಂದು ಸವಾಲು ಹಾಕುವ ಜೊತೆಗೆ 24 ಗಂಟೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ
ಮಾಡಲು ವಿಶೇಷ ತಂಡ ರಚನೆ ಮಾಡಿ ಬಡ ರೈತ ಕೂಲಿ ಕಾರ್ಮಿಕರ ಮಾಂಗಲ್ಯವನ್ನು ರಕ್ಷಣೆ
ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಆಯುಕ್ತರು, ಹೊಸದಾಗಿ ಜಿಲ್ಲೆಗೆ ಬಂದಿದ್ದೇನೆ.
ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಅಕ್ರಮ ಮದ್ಯ ಮಾರಾಟ ತಡೆ ಮಾಡುವ ಭರವಸೆ
ನೀಡಿದರು.
ಮನವಿ ನೀಡುವಾಗ ಗೌರಮ್ಮ, ವೆಂಕಟಮ್ಮ, ಮುನಿರತ್ನ, ಶೋಭ, ರತ್ನಮ್ಮ, ಭಾಗ್ಯಮ್ಮ,
ತುಳಸಮ್ಮ ಮುಂತಾದವರಿದ್ದರು.