ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಒತ್ತುವರಿ (Encroachment) ತೆರವುಗೊಳಿಸದಂತೆ ವಿಧಾನ ಪರಿಷತ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಕೇರಳ ಹಾಗೂ ಕಾರವಾರದಲ್ಲಿ ಭೂಮಿ ಕುಸಿತದ ಬಳಿಕ ರಾಜ್ಯ ಸರಕಾರ 2015ರಿಂದ ಈಚೆಗೆ ಆಗಿರುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವ ಕ್ರಮ ಸರಿಯಾಗಿದೆ. ಆದರೆ ಹೊಟ್ಟೆ ಪಾಡಿಗಾಗಿ ಸಾಗುವಳಿ ಮಾಡಿಕೊಂಡಿರುವ ರೈತರ ಭೂಮಿ ತೆರವು ಮಾಡಬಾರದು.ಎಂದು ತಿಳಿಸಿದ್ದಾರೆ
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಸಣ್ಣ ರೈತರು ಸಾಗುವಳಿ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಅಹಿಂದ ವರ್ಗವೇ ಹೆಚ್ಚಿದೆ ಎಂಬುದು ಗಮನಾರ್ಹ. ಯಾವುದೇ ವಾಣಿಜ್ಯ ಉದ್ದೇಶದಿಂದ ಈ ಜನರು ಸಾಗುವಳಿ ಮಾಡಿಲ್ಲ. ವಿವಿಧ ಯೋಜನೆಗಳಲ್ಲಿ ನಿರಾಶ್ರಿತರಾಗಿರುವ ಬಡ ರೈತರು ಜೀವನೋಪಾಯಕ್ಕೆ ಕೃಷಿ ಮಾಡಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು.
ಇನ್ನು, ಈ ಕುರಿತು ಸ್ಪಷ್ಟನೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ. ಬದಲಾಗಿ ದೊಡ್ಡ ಒತ್ತುವರಿ ಮತ್ತು 2015ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. ಮೂರು ಎಕರೆಗಿಂತ ಕಡಿಮೆ (ಒತ್ತುವರಿ ಮತ್ತು ಆ ವ್ಯಕ್ತಿಯ ಪಟ್ಟಾಭೂಮಿ ಸೇರಿ) ಒತ್ತುವರಿ ಆಗಿದ್ದಲ್ಲಿ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.