ಶ್ರೀನಿವಾಸಪುರ: ತಾಲ್ಲೂಕಿನ ಪಾತಪಲ್ಲಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ 4 ಗಂಟೆಗೆ ಜೆಸಿಬಿ ಯಂತ್ರಗಳೊಂದಿಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮಾವಿನ ಮರಗಳನ್ನು ಉರುಳಿಸಿ ತೆರವುಗೊಳಿಸಿದರು.
ತಾಲ್ಲೂಕಿನ ಪಾತಪಲ್ಲಿ, ಶೆಟ್ಟಿಹಳ್ಳಿ ಹಾಗೂ ಚೌಡನಹಳ್ಳಿ ಸುತ್ತಮುತ್ತ ನೂರು ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಯಿತು. ಉಪ ಅರಣ್ಯ ವ¯ಯಾಧಿಕಾರಿ ಕೆ.ಮಹೇಶ್, ಉಪ ಅರಣ್ಯಾಧಿಕಾರಿಗಳಾದ ಶ್ರೀನಾಥ್, ಶ್ರೀನಾಥ್, ಅನಿಲ್ ಕುಮಾರ್, ನವೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಆಗ ಒತ್ತುವರಿದಾರರು ಹಾಗೂ ರೈತರು, ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರೊಂದಿಗೆ ಕಾರ್ಯಾಚರಣೆ ಕ್ಷೇತ್ರಕ್ಕೆ ನುಗ್ಗಿಬಂದರು. ಅರಣ್ಯ ಸಿಬ್ಬಂದಿ ತಡೆಯುವ ಪ್ರಯತ್ನ ನಡೆಸಿತಾದರೂ, ರೈತರು ಒತ್ತುವರಿ ತೆರವುಗೊಳಿಸಲಾದ ಸ್ಥಳಕ್ಕೆ ಬಂದು ವೀಕ್ಷಿಸಿದರು. ಸಂಸದರು ಅರಣ್ಯ ಇಲಾಖೆ ನೀಡಿದ ಅರಣ್ಯ ಪ್ರದೇಶದ ನಕ್ಷೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ರಾಜ್ಯದ ರೈತರು ಬೋಗಸ್ ದಾಖಲೆ ಮಾಡಿಕೊಂಡಿಲ್ಲ. ಸರ್ಕಾರವೇ ಅವರಿಗೆ ಜಮೀನು ನೀಡಿದೆ. ಆದರೆ ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಸರ್ಕಾರದ ರೈತ ವಿರೋಧಿ ನಿಲುವಿನ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಮುಂದೆ ಸೂಕ್ತವಾದ ಸ್ಥಳದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಸಮಸ್ಯೆ ತಿಳಿಸಲು ಜಿಲ್ಲಾಧಿಕಾರಿಗೆ ಫೋನ್ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಜನರ ಸಮಸ್ಯೆ ಆಲಿಸುವುದು ಹಾಗೂ ಅವರಿಗೆ ನ್ಯಾಯ ಒದಗಿಸುವುದು ಜನಪ್ರತಿನಿಧಿಯಾಗಿ ನನ್ನ ಹಕ್ಕು. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳಿಂದ ಶಹಬಾಷ್ಗಿರಿ ಪಡೆಯಲು ನನ್ನನ್ನು ಒತ್ತುವರಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸಿದರು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮುಖಂಡರಾದ ರೋಣೂರು ಚಂದ್ರಶೇಖರ್, ವೆಂಕಟರೆಡ್ಡಿ, ಆಂಜನೇಯರೆಡ್ಡಿ ಇದ್ದರು.