ಶ್ರೀನಿವಾಸಪುರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಶ್ರೀನಿವಾಸಪುರ ತಾಲೂಕು ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ ತಾಲೂಕಿನ ಕೆರೆಗಳ ಒತ್ತುವರಿ ನಡೆದಿದ್ದು, ಕೂಡಲೇ ಕೆರೆಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು. ಒಂದು ಕೆರಯ ಒತ್ತುವರಿ ತೆರವು ಗೊಳಿಸಲು ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲವಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಒತ್ತುವರಿ ಮಾಡಿರುವವನು ಎಂಪಿ, ಎಂಎಲ್‍ಎ, ಎಂಎಲ್‍ಸಿಯ ಬಂಟನೇ ಆಗಿರಲಿ, ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ಒಬ್ಬರಿಗೊಂದು ಒಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಮಾಡುವುದಾಗಲೀ ಅದರಲ್ಲಿ ರಾಜಕಾರಣ ಮಾಡುವುದು ಬೇಡ ಎಂದರು.
ತಾಲೂಕಿನ ಅಕಾಲಿಕ ಮಳೆಯಿಂದ ಬೆಳೆ ನಷ್ಟ ಅನುಭವಿಸಿರುವ ಮಾವು ಮತ್ತು ಟಮೋಟೋ ಬೆಳಗಾರರಿಗೆ ಪರಿಹಾರ ನೀಡಬೇಕು. ಸರ್ವೆ ಇಲಾಖೆಯಲ್ಲಿ ರೈತರಿಗೆ ಹಿಸ್ಸಾ ಪೋಡಿ ಮಾಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದು ಹಾಗೂ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಇದನ್ನು ಸರಿಪಡಿಸಬೇಕು. ಬೆಳೆ ವಿಮೆ ಕಟ್ಟಿರುವಂತಹ ರೈತರಿಗೆ ಸರ್ಕಾರದಿಂದ ಬೆಳೆ ವಿಮೆ ಬಂದಿರುವುದಿಲ್ಲ. ಆದ್ದರಿಂದ ಕೂಡಲೇ ಅನುಷ್ಠಾನಗೊಳಿಸಬೇಕು. ರೈತರು ಉತ್ಪಾದಿಸುವ ಹಾಲಿಗೆ ಕನಿಷ್ಟ 40 ರೂ ದರ ನೀಡಬೇಕು. ತೋಟಗಾರಿಕೆ ಇಲಾಖೆ, ರೇಷ್ಮ ಇಲಾಖೆ ಹಾಗೂ ಕೃಷಿ ಇಲಾಖೆಗಳಲ್ಲಿ ರೈತರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದನ್ನು ಸರಿಪಡಿಸಬೇಕು.
ಸರ್ಕಾರದಿಂದ ಕೃಷಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ.ಆದ್ದರಿಂದ ತಾಲೂಕಿನಲ್ಲಿ ದಂಡಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕೆಂದು ಒತ್ತಾಯಿಸಿದರು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಜಾಸ್ತಿಯಾಗಿದ್ದು, ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಸಭೆ ನಡೆಸಿ ಕ್ರಮಕೈಗೊಳ್ಳಬೇಕೆಂದರು.
ಜಿಲ್ಲಾಧಿಕಾರಿ ವೆಂಕಟರಾಜು ಮಾನವಿ ಪತ್ರ ಸ್ವೀಕರಿಸಿ ಮಾತನಾಡಿ ಕೆರೆಯ ಒತ್ತುವರಿಯ ಬಗ್ಗೆ ದಾಖಾಲೆಗಳನ್ನು ಪರಿಶೀಲಿಸಲಾಗುವುದು ಎಂದರು. ಒತ್ತವರಿಯಾಗಿರುವ ಕೆರೆಯ ಸ್ಥಳಕ್ಕೆ ಬೇಟಿ ನೀಡಿ ಸ್ಥಳಪರಿಶೀಲಿಸುವಂತೆ ತಹಸೀಲ್ದಾರ್‍ರವರಿಗೆ ಸೂಚನೆ ನೀಡಿದರು. ಹಾಗೂ ರೈತ ಸಂಘವು ನೀಡಿರುವ ವಿವಿಧ ಬೇಡಿಕೆಗಳಿಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಶರೀನಾತಾಜ್, ತಾಲೂಕು ಅಧ್ಯಕ್ಷ ನಂಬಿಹಳ್ಳಿ ಎನ್.ಜಿ.ಶ್ರೀರಾಮಿರೆಡ್ಡಿ , ರೈತ ಸಂಘದ ಸದಸ್ಯರಾದ ಬಿ.ನಾರಾಯಣಸ್ವಾಮಿ, ಸಿ.ಎಂ.ಶ್ರೀಧರ್, ಹೆಬ್ಬಟ ರಮೇಶ್, ಎನ್.ಬಿ.ನರಸಿಂಹಪ್ಪ, ಪಿ.ಎಂ.ನಾರಾಯಣರೆಡ್ಡಿ, ಕೆ.ರಾಮಕೃಷ್ಣ, ಮುನೇಗೌಡ, ಜಿ.ಎಂ.ಅಶ್ವತ, ರಾಜಣ್ಣ, ಬೈರಾರೆಡ್ಡಿ ಇತರರು ಇದ್ದರು.