ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಮಾ.1 : ಮೇಕೆದಾಟು ಯೋಜನೆಯ ವ್ಯಾಪ್ತಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸಿ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ರವರಿಗೆ ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಸಾಮಾಜಿಕ ಕಾರ್ಯಕರ್ತ ಕೆ.ಎನ್. ರವೀಂದ್ರನಾಥ್ ಮನವಿ ಸಲ್ಲಿಸಿದರು.
ಕಾವೇರಿ ನದಿಯ ನೀರಿನಲ್ಲಿ ಸುಮಾರು 100ಟಿಎಂಸಿ ಯಷ್ಟು ನೀರು ತಮಿಳುನಾಡಿನಿಂದ ವ್ಯರ್ಥವಾಗಿ ಹರಿದು ಸಮುದ್ರವನ್ನು ಸೇರಿ ಪೋಲಾಗುತ್ತಿದೆ. ಈ ರೀತಿ ವ್ಯರ್ಥವಾಗುವ ನೀರನ್ನು ಸದ್ಭಾಳಕ್ಕೆ ಮಾಡಿಕೊಳ್ಳುವ ಸದುದ್ದೇಶದಿಂದ ಕರ್ನಾಟಕ ಸರ್ಕಾರವು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ಒಂಟಿಗೊಂಡ್ಲು ಗ್ರಾಮದ ಬಳಿ ಆಣೆಕಟ್ಟುನ್ನು ನಿರ್ಮಿಸಿ 67.16ಟಿಎಂಸಿ ನೀರನ್ನು ಕುಡಿಯುವ ನೀರಿನ ಸಲುವಾಗಿ ಸಂಗ್ರಹಿಸುವ ಮತ್ತು 400 ಮೆಗಾವ್ಯಾಟ್ ವಿದ್ಯುತ್ಅನ್ನು ಉತ್ಪಾದಿಸುವ ಯೋಜನೆಯನ್ನು ರೂಪಿಸಿದ್ದು ಇದನ್ನು ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿ ಇದೆ.
ಈ ಯೋಜನೆಯ ಅಡಿಯಲ್ಲಿ ರಾಮನಗರ ಜಿಲ್ಲೆ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಸೇರ್ಪಡೆಮಾಡಲಾಗಿದ್ದು ಸದಾ ಬರಪೀಡಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳಾಪುರ ಜಿಲ್ಲೆಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಶಾಶ್ವತ ಕುಡಿಯುವ ನೀರನ್ನು ಒದಗಿಸುವಂತಹ ನದಿ, ನಾಲೆಗಳು ಇರುವುದಿಲ್ಲ. ಇದರ ಜೊತೆಗೆ ಅಂತರ್ಜಲದ ಮಟ್ಟ 1500-2000 ಅಡಿಗಳಿಗೆ ಕುಸಿದಿದ್ದು ಇಷ್ಟು ಆಳದಿಂದ ಹೊರಬರುವ ನೀರನ್ನು ಕುಡಿಯಲು ಅನುಪಯುಕ್ತವಾಗಿದ್ದು, ಜನರ ಅರೋಗ್ಯದ ಮೇಲೆ ಕೆಟ್ಟ ದುಷ್ಪರಿಣಾಮವನ್ನು ಬೀರಿ ಹಲವಾರು ಅರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುವಂತಹ ವಿಷಕಾರಿಯಾದ ಲವನಾಣಾಂಶಗಳಿಂದ ಕೂಡಿರುತ್ತದೆ. ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ದುಪಟ್ಟು ಪ್ರಮಾಣದಲ್ಲಿ ಫೆÇ್ಲೀರೈಡ್, ಆರ್ಸಿನಿಕ್ ಐರನ್, ಪೆÇಟ್ಯಾಶಿಯಂ, ಆಯಿಲ್ ಮುಂತಾದ ಅಪಾಯಕಾರಕ ರಾಸಾಯನಿಕಗಳನ್ನು ಹೊಂದಿದ್ದು ಆತಂಕಕಾರಿ ವಿಷಯವಾಗಿರುತ್ತದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರ್ಮಿಸಿರುವಂತ ಶುದ್ಧನೀರಿನ ಘಟಕಗಳನ್ನು ಸಹ ಇದರ ಪರಿಣಾಮವಾಗಿ 2-3 ತಿಂಗಳುಗಳಲ್ಲಿಯೇ ಕೆಟ್ಟುನಿಂತಿರುವಂತಹ ಉದಾಹರಣೆಗಳು ಸಾಕಷ್ಟು ಇದೆ. ಈ ಎಲ್ಲದಕ್ಕೆ ಒಂದೇ ಉತ್ತಮ ಮಾರ್ಗವೆಂದರೆ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಮೇಕೆದಾಟಿ ನಂತಹ ಯೋಜನೆಯ ವ್ಯಾಪ್ತಿಗೆ ಸೇರಿಸುವುದು ಆಗಿರುತ್ತದೆ. ಇಲ್ಲಿ ಸಂಗ್ರಹಿಸುವಂತಹ 67.16ಟಿಎಂಸಿ ನೀರಿನಲ್ಲಿ ಈ ಎರಡು ಜಿಲ್ಲೆಗಳಿಗೆ ಸುಮಾರು 12ಟಿಎಂಸಿ ನೀರನ್ನು ಒದಗಿಸಿದಲ್ಲಿ ಸಾಕಾಗುತ್ತದೆ. ಈ ಎರಡು ಜಿಲ್ಲೆಗಳು ಈಗಾಗಲೇ ಯೋಜನೆಯಲ್ಲಿ ಸೇರಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಂತೆ ಇರುವುದರಿಂದ ಯೋಜನೆಯ ವೆಚ್ಚವೂ ಸಹ ಅಧಿಕವಾಗುವುದಿಲ್ಲ.
ಈ ಕುರಿತು ಈಗಾಗಲೇ ಘನವೆತ್ತಾ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಲಾಗಿರುತ್ತದೆ. ಇದಕ್ಕೆ ಸ್ಪಂದಿಸಿದ ಇವರುಗಳು ಕೋಲಾರ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಪತ್ರದೊಂದಿಗೆ ಈ ಕುರಿತು ನಿಯಮನುಸಾರ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ಪತ್ರಗಳನ್ನು ಬರೆದಿರುತ್ತಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಪಟ್ಟಂತಹ ಎಲ್ಲಾ ಶಾಸಕರುಗಳು ವಿಧಾನ ಪರಿಷತ್ ಸದಸ್ಯರುಗಳು ಈ ಎರಡು ಜಿಲ್ಲೆಗಳನ್ನು ಮೇಕೆದಾಟು ಯೋಜನೆಯ ಅಡಿಯಲ್ಲಿ ಸೇರಿಸಿ ಡಿಪಿಎಆರ್ ಮಾಡುವಂತೆ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗಳಿಗೆ ಮತ್ತು ಜಲಸಂಪನ್ಮೂಲ ಸಚಿವರಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಬೇಕು. ಇದನ್ನು ಸದನದಲ್ಲಿ ಪ್ರಸ್ತಾಪಿಸಿ ಸರಕಾರದ ಮೇಲೆ ಒತ್ತಡವನ್ನು ಹಾಕಬೇಕು. ಮಾರ್ಚ್ 4 ರ<ದು ಮಂಡಿಸಲಿರುವ ಸರ್ಕಾರ ಬಜೆಟ್ನಲ್ಲಿ ಇದನ್ನು ಸೇರಿಸಿ ಹಣವನ್ನು ತೆಗೆದಿಡುವಂತೆ ಕೋರಿ ಜಿಲ್ಲೆಗಳ ಜನರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕುಡಿಯುವ ನೀರಿನ ಆಹಾಕಾರದಿಂದ ಮುಕ್ತಗೊಳಿಸುವ ಸದುದ್ದೇಶದಿಂದ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕೆಂದು ಜಿಲ್ಲೆಗಳ ಜನಪರವಾಗಿ ಸಾಮಾಜಿಕ ಕಾರ್ಯಕರ್ತ ರವೀಂದ್ರನಾಥ್ ಮನವಿಯಲ್ಲಿ ಕೋರಿದ್ದಾರೆ.