ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಬೆಳೆ ನಷ್ಟ ಅನುಭವಿಸಿರುವ ಮಾವು ಹಾಗೂ ಟೊಮೆಟೊ ಬೆಳೆಗಾರರಿಗೆ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್ ಪ್ರತಿಭಟನೆ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿ, ಇಪ್ಪತ್ತು ದಿನಗಳಿಂದ ಆಗಾಗ ಸುರಿದ ಭಾರಿ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿ ಮಾವು ಹಾಗು ಟೊಮೆಟೊ ಫಸಲಿಗೆ ಅಪಾರ ನಷ್ಟ ಉಂಟಾಗಿದೆ. ಆದರೆ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆಪಾದಿಸಿದರು.
ಮಾವು ಹಾಗೂ ಟೊಮೆಟೊ ತಾಲ್ಲೂಕಿನ ಜನರ ಜೀವನಾಧಾರ. ಆದರೆ ಮಳೆ ಅದನ್ನು ಬಲಿ ಪಡೆದಿದೆ. ಆದ್ದರಿಂದ ಸರ್ಕಾರ ಪ್ರತಿ ಹೆಕ್ಟೇರ್‍ನಲ್ಲಿ ನಷ್ಟವಾಗಿರುವ ಮಾವಿನ ಫಸಲಿಗೆ ಕನಿಷ್ಠ ರೂ.2.50 ಲಕ್ಷ, ಹಾಗೂ ಟೊಮೆಟೊಗೆ ನಷ್ಟಪರಿಹಾರವಾಗಿ ಹೆಕ್ಟೇರ್ ಒಂದಕ್ಕೆ ರೂ.2 ಲಕ್ಷ ನೀಡಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ನೀಡಿದರು.
ಮುಖಂಡರಾದ ಎನ್.ವೀರಪ್ಪರೆಡ್ಡಿ, ಎಸ್.ಎಂ.ನಾಗೇಶ್, ಆರ್.ವೆಂಕಟೇಶ್, ಶ್ರೀನಿವಾಸ್, ನಂಜಪ್ಪ, ಸೈಯದ್ ಫಾರೂಕ್, ಮಂಜುಳ, ವೆಂಕಟೇಶ್, ರೆಡ್ಡಮ್ಮ ಇದ್ದರು.