ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಕೋಲಾರ ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 15 ಮಂದಿಯಲ್ಲಿ ಆರು ಮಂದಿ ನಾಮಪತ್ರ ವಾಪಸ್ಸು ಪಡೆದ ಹಿನ್ನಲೆಯಲ್ಲಿ 9 ಮಂದಿ ಅವಿರೋಧವಾಗಿ ಆಯ್ಕೆಯಾದರು.
ಸರ್ಕಾರಿ ಪ್ರೌಢಶಾಲೆಗಳಿಂದ ಆರು ಮಂದಿ ಹಾಗೂ ಅನುದಾನಿತ ಶಾಲೆಗಳಿಂದ ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳಿಂದ ಶಿವಕುಮಾರ್, ಕೆ.ನಾರಾಯಣರೆಡ್ಡಿ, ಗಂಗಾಧರಮೂರ್ತಿ, ಡಿ.ಎನ್.ಮುಕುಂದ, ಸುರೇಶ್, ರಾಜು ಆಗಿದ್ದು, ಅನುದಾನಿತ ಶಾಲೆಗಳಿಂದ ಸುಭಾಷ್ ಶಾಲೆಯ ಕೃಷ್ಣೇಗೌಡ, ತೊಟ್ಲಿ ಶಾಂತಿನಿಕೇತನ ಶಾಲೆಯವೇಣುಗೋಪಾಲಕೃಷ್ಣನಾಯಕ್, ಮಾತೃಭೂಮಿ ಶಾಲೆಯ ಬೈಯ್ಯಮ್ಮ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ನಡೆಯುವುದನ್ನು ತಪ್ಪಿಸಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಲು ಹಲವು ಹಿರಿಯ ಮುಖಂಡರು ಶ್ರಮಿಸಿದ್ದು, ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಎಲ್ಲರ ಮನವೊಲಿಸಿ ಯಶಸ್ವಿಯಾದರು.
ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಬಿ.ಎಂ.ಚಂದ್ರಪ್ಪ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ, ಎಸ್ ಚೌಡಪ್ಪ, ಶಿಕ್ಷಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎಂ.ಮುನಿಯಪ್ಪ, ಕೋಲಾರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ ಮುರಳಿ ಮೋಹನ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್, ಜಿಲ್ಲಾಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಜಿ.ಎನ್.ವೇಣುಗೋಪಾಲ್, ಮುಖ್ಯಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಆರ್. ರಮೇಶ್ಗೌಡ, ಮತ್ತಿತರರು ಸಭೆ ನಡೆಸಿ ಅಭ್ಯರ್ಥಿಗಳ ಮನವೊಲಿಸಿ ಅವಿರೋಧ ಆಯ್ಕೆಗೆ ಸಹಕರಿಸಿದರು.
ಚುನಾವಣಾಧಿಕಾರಿಗಳಾಗಿ ಎನ್.ಎಸ್.ನರಸಿಂಹಯ್ಯ, ಮುಖ್ಯಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ದಾಸಪ್ಪ, ಶಂಕರಪ್ಪ ಕಾರ್ಯನಿರ್ವಹಿಸಿದರು.