ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಮರಗಿಡ,ಕೊಳವೆಬಾವಿಗಳಿಗೆ ಪರಿಹಾರಕ್ಕೆ ಪಿ ನಂಬರ್ ದುರಸ್ಥಿ ಮಾಡಿ ರೈತಸಂಘ :ಸಂಸದ ಎಸ್.ಮುನಿಸ್ವಾಮಿಗೆ ಆಗ್ರಹ

ಕೋಲಾರ; ಫೆ.8: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರಗಿಡಗಳಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತಸಂಘದಿಂದ ಸಂಸದ ಎಸ್.ಮುನಿಸ್ವಾಮಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಒಂದು ವಾರದೊಳಗೆ ಗಡಿ ಭಾಗದ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನ ಮರಗಿಡಗಳು ಹಾಗೂ ಕೊಳವೆಬಾವಿಗಳಿಗೆ ಪರಿಹಾರ ನೀಡದೇ ಇದ್ದರೆ ಕಾಮಗಾರಿಯನ್ನು ಸಂಪೂರ್ಣವಾಗಿ ಗಡಿಭಾಗದಲ್ಲಿ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೊಂದ ರೈತರಾದ ಚೆಂಗೇಗೌಡ ಹಾಗೂ ಜನಾರ್ಧನ್ ನೀಡಿದರು.
ನೂರಾರು ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ರೈತರ ಕೃಷಿ ಭೂಮಿಯನ್ನು ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಸರ್ಕಾರದ ಆದೇಶದಂತೆ ಭೂಮಿಯನ್ನು ವಶಪಡಿಸಿಕೊಂಡು ರೈತರಿಗೆ ಪರಿಹಾರವನ್ನು ನೀಡಿದ್ದಾರೆ.
ಆದರೆ, ನೂರಾರು ವರ್ಷಗಳಿಂದ ಅದೇ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಮಾವು ಹುಣಸೆ, ಹಲಸು, ಸೀಬೆ, ತೆಂಗು, ಮರಗಳಿಗೆ ಪರಿಹಾರ ನೀಡುತ್ತೇವೆಂದು ಮಾತು ಕೊಟ್ಟಿದ್ದ ಅಧಿಕಾರಿಗಳು ಈಗ ಪಿ ನಂಬರ್ ದುರಸ್ಥಿಯಾಗುವವರೆಗೂ ಪರಿಹಾರ ವಿತರಣೆ ಮಾಡುವುದಿಲ್ಲ ಎಂದು ರೈತರಿಗೆ ಪರಿಹಾರ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಿ ನಂಬರ್‍ನಲ್ಲಿರುವ ಮರಗಿಡಗಳಿಗೂ ಪರಿಹಾರ ನೀಡುತ್ತೇವೆ. ತೋಟಗಾರಿಕೆ ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡಿದ್ದೇವೆ. ಸರ್ಕಾರ ಪರಿಹಾರ ನೀಡುವಂತೆ ಆದೇಶ ಮಾಡಿದೆ ಎಂದು ಅಧಿಕಾರಿಗಳೇ ರೈತರನ್ನು ನಂಬಿಸಿ ಈಗ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪಿ ನಂಬರ್ ದುರಸ್ಥಿ ಮಾಡಬೇಕಾದರೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳನ್ನು ರೈತರು ಕಡತಗಳ ಸಮೇತ ಅರ್ಜಿ ಸಲ್ಲಿಸಿದರೆ ನೂರೊಂದು ನೆಪ ಹೇಳಿ ಅದನ್ನು ತಿರಸ್ಕರಿಸಿ ಅದೇ ಕಡತ ದಲ್ಲಾಳಿಗಳ ಮುಖಾಂತರ ಲಕ್ಷಲಕ್ಷ ಲಂಚ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವುದೇ ಸಮಸ್ಯೆಯಿಲ್ಲದೆ ಪಿ ನಂಬರ್ ದುರಸ್ಥಿಯಾಗುತ್ತದೆ. ಇಂತಹ ಅವ್ಯವಸ್ಥೆಯಲ್ಲಿ ಭೂಮಿ ಕಳೆದುಕೊಂಡ ರೈತ ಲಕ್ಷಲಕ್ಷ ಲಂಚ ನೀಡಿ ಪಿ ನಂಬರ್ ದುರಸ್ಥಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಾಗಲೇ ಮಾಲೂರು, ಬಂಗಾರಪೇಟೆ, ಬೇತಮಂಗಲ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳು ಮೂಲ ಕಡತವಿರುವ ಪಿ ನಂಬರ್‍ಗಳನ್ನು ದುರಸ್ಥಿ ಮಾಡುವ ಮುಖಾಂತರ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡುತ್ತಿದ್ದಾರೆ. ಆದರೆ, ಮುಳಬಾಗಿಲು ಗಡಿ ಭಾಗದ ಚುಕ್ಕನಹಳ್ಳಿ ಏತರನಹಳ್ಳಿ ರೈತರ ಪಿ ನಂಬರ್ ಅನ್ನು ದುರಸ್ಥಿ ಮಾಡುವಂತೆ ಕಂದಾಯ, ಸರ್ವೇ ಅಧಿಕಾರಿಗಳ ಜೊತೆಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ನೊಂದ ರೈತರಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ ಎಂದು ಆರೋಪ ಮಾಡಿದರು.
ಮಾನ್ಯರು ಸಂಬಂಧಪಟ್ಟ ಕಂದಾಯ, ಸರ್ವೇ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು, ಚೆನ್ನೈ ಕಾರಿಡಾರ್ ರಸ್ತೆಯ ಅಭಿವೃದ್ಧಿ ಅಧಿಕಾರಿಗಳನ್ನು ಸಭೆ ಕರೆದು ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರಗಿಡಗಳನ್ನು ಕಳೆದುಕೊಂಡಿರುವ ರೈತರ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜಣ್ಣ, ವೆಂಕಟರಾಮಪ್ಪ, ವಿಶ್ವನಾಥ್, ಜಗದೀಶ್, ಕುಮಾರ್, ವೆಂಕಟೇಶ್, ನಟರಾಜ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು