ಬೆಂಗಳೂರು: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬದವರು ತಕ್ಷಣ ಅವರನ್ನು ಸರ್ಕಾರಿ ಕಾರಿನಲ್ಲಿಯೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಬೆಳಗಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್ 14ರಂದು ಜನಿಸಿದ್ದ ಉಮೇಶ್ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದ ಉಮೇಶ್ ಕತ್ತಿ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಅಲ್ಲದೆ ತಾವು ಒಂದಲ್ಲ ಒಂದು ದಿನ ನಾನು ಮುಖ್ಯಮಂತ್ರಿಯಾಗುವುದಾಗಿ ಹಲವು ಬಾರಿ ಹೇಳಿದ್ದರು.
5 ಪಕ್ಷ, ಎಂಟು ಬಾರಿ ಶಾಸಕ : ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು.
2008ರಲ್ಲಿ ಮತ್ತೆ ಜೆಡಿಎಸ್ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಆದರೆ ಚುನಾವಣೆ ಬಳಿಕ ನಡೆದ ಆಪರೇಷನ್ ಕಮಲದ ಭಾಗವಾಗಿ ಕತ್ತಿ ಬಿಜೆಪಿ ಸೇರಿದರು.
. ಈಗ ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಹಾಗೂ ಅರಣ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.
ರಾಜ್ಯದ ಉತ್ತರ ಭಾಗದ ಪ್ರಮುಖ ರಾಜಕೀಯ ಕೊಂಡಿ, ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗೆ ಸರ್ಕಾರ ರಜೆ ಘೋಷಿಸಿದೆ.ಸಚಿವರ ನಿಧಾನಕ್ಕೆ ಸಂತಾಪ ಸೂಚಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದರು.