

ಶ್ರೀನಿವಾಸಪುರ: ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು. ಮತದಾನ ಪವಿತ್ರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ರಕ್ಷಣೆ ನಿಸ್ವಾರ್ಥ ಮತದಾರರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಲು ಮನವಿ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥರೆಡ್ಡಿ, ಸಿಡಿಪಿಒ ಶೋಭಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.