

ಶ್ರೀನಿವಾಸಪುರ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯ ಮೇಲೆ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಿಸುವುದರ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು ಎಂದು ತಹಶೀಲ್ದಾರ್ ಶರಿನ್ ತಾಜ್ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಭಾರತ ಸೇವಾದಳದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಸಮಾರಂಭೆದಲ್ಲಿ ಸಾರ್ವಜನಿಕರಿಗೆ ರಾಷ್ಟ್ರಧ್ವಜ ವಿತರಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಈ ಸಂದರ್ಭದಲ್ಲಿ ದೇಶವಾಸಿಗಳು ಒಟ್ಟಾಗಿ ಸಂಭ್ರಮಾಚರಣೆ ಮಾಡಬೇಕು. ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸುತ್ತಾ ಸಂಭ್ರಮಿಸಬೇಕು ಎಂದು ಹೇಳಿದರು.
ಆ.13 ರಿಂದ ಮೂರು ದಿನಗಳ ಕಾಲ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು. ಧ್ವಜಾರೋಹಣ ಸಂದರ್ಭದಲ್ಲಿ ಧ್ವಜ ನಿಯಮ ಪಾಲಿಸಬೇಕು. ಯಾವುದೇ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಚಾರವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಬಲರಾಮಚಂದ್ರೇಗೌಡ, ಭಾರತ ಸೇವಾದಳದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನಾಗರಾಜ್, ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಜಿಲ್ಲಾ ಪ್ರತಿನಿಧಿ ಆರ್.ರವಿಕುಮಾರ್, ಸದಸ್ಯರಾದ ಎಸ್.ವೇಣುಗೋಪಾಲ್, ಎಸ್.ಲಕ್ಷ್ಮಣಬಾಬು, ಎಸ್.ಕಿಶೋರ್ ಕುಮಾರ್, ಅಜೀರ, ಭಾವನಾ, ಮುರಳಿ, ಯಮನೂರು ನಾಗರಾಜ್, ಶ್ರೀನಿವಾಸಯ್ಯ, ನಟರಾಜ್, ಚೆನ್ನಪ್ಪ ಇದ್ದರು.