ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ತಾಲೂಕು ಕಚೇರಿ ಅವ್ಯವಸ್ಥೆಯನ್ನು ಸರಿಪಡಿಸಿ ಸರ್ಕಾರಿ ಆಸ್ತಿಗಳಿಗೆ ಅಕ್ರಮ ದಾಖಲಾತಿ ಸೃಷ್ಠಿ ಮಾಡುವ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತಸಂಘದಿಂದ ತಾಲೂಕು ಕಚೇರಿಯೆದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹನ್ಸಾಮರಿಯಾ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ತಾಲೂಕು ಕಚೇರಿ ಅವ್ಯವಸ್ಥೆಗಳ ಹಾಗೂ ದಲ್ಲಾಳಿಗಳ ಇಲಾಖೆಯಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ಪ್ರತಿ ದಾಖಲೆಗೂ ತಿಂಗಳಾನುಗಟ್ಟಲೇ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಜೊತೆಗೆ ಅಧಿಕಾರಿಗಳನ್ನು ಸಂರ್ಪಕ ಮಾಡಬೇಕಾದರೆ ದಲ್ಲಾಳಿಗಳ ನೆರಳಿಲ್ಲದೆ ಇಲಾಖೆಯ ಬಾಗಿಲಿಗೂ ಬಡವನ ನೆರಳೂ ಸಹ ಬೀಳುವಂತಿಲ್ಲ. ತಾಲ್ಲೂಕು ಕಚೇರಿಯಲ್ಲಿ ಕಡತಗಳು ದಲ್ಲಾಳಿಗಳ ಕೈಗೆ ನೀಡುತ್ತಾರೆ, ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ತಾಲೂಕು ಕಚೇರಿ ಮಾರ್ಪಟ್ಟಿದೆ. ಪೂರ್ವಜರು ಹನಿ ಹನಿ ಬೆವರು ಸುರಿಸಿ ಕಟ್ಟಿ ಬೆಳೆಸಿದ ಕೆರೆ ರಾಜಕಾಲುವೆಗಳಿಗೆ ಕಂದಾಯ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಠಿ ಮಾಡಿ ಹಳೆಯ ನಂಬರ್ ಗೆ ಹೊಸ ನಂಬರ್ ನೀಡುವ ಮೂಲಕ ಕೆರೆ, ರಾಜಕಾಲುವೆಗಳನ್ನೇ ಮಾರಾಟ ಮಾಡುತ್ತಿದ್ದರೂ ಕೆರೆ, ರಾಜಕಾಲುವೆ ಉಳಿಸಬೇಕಾದ ಅಧಿಕಾರಿಗಳೇ ದಂಧೆಯಲ್ಲಿ ಭಾಗಿಯಾಗಿರುವುದು ದುರಾದೃಷ್ಟಕರವಾಗಿದೆ.
ಕೆರೆ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕೆಂಬ ಛಲ ಸಾರ್ವಜನಿಕರದ್ದಾದರೆ ಲಕ್ಷ ಲಕ್ಷ ಸಂಬಳ ಪಡೆದು ಕೆರೆಗಳನ್ನೇ ಮಾರಾಟ ಮಾಡುವ ವೃತ್ತಿ ಅಧಿಕಾರಿಗಳದ್ದಾಗಿದೆ. ಇದನ್ನು ಸರಿಪಡಿಸದೇ ಇದ್ದರೆ ಸಾರ್ವಜನಿಕರೇ ಕಾನೂನು ಕೈಗೆ ತೆಗೆದುಕೊಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ತಾಲೂಕಿನಾದ್ಯಂತ ಕೆರೆಗಳಿಗೆ ಪ್ರಮುಖವಾಗಿ ದಿನ್ನೆಹಳ್ಳಿ ಗ್ರಾಮದ ಕೆರೆ , ವಕ್ಕಲೇರಿ, ಸುಗಟೂರು, ಹೋಳೂರು ವ್ಯಾಪ್ತಿಯ ಕೆರೆಗಳಿಗೆ ಹೊಸ ನಂಬರ್ ಸೃಷ್ಠಿ ಮಾಡಿ 1963 ರ ವಿಶೇಷ ಜಿಲ್ಲಾಧಿಕಾರಿಗಳ ಆದೇಶ ಕಾಪಿಯನ್ನು ಹಿಡಿದುಕೊಂಡು ಪ್ರತಿಯೊಂದಕ್ಕೂ ತಕರಾರು ಅರ್ಜಿ ಹಾಕಿದ್ದರೂ ಖಾತೆ ಮಾಡಲು ಮುಂದಾಗಿರುವುದು ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ಭ್ರಷ್ಟಾಚಾರತೆಗೆ ಉದಾಹರಣೆಯಾಗಿದೆ.
ದಾಖಲೆ ವಿಭಾಗದಿಂದ ಹಿಡಿದು ಟಫಾಲು ಸೆಕ್ಷನ್ ವರೆಗೂ ಲಂಚ ಲಂಚ ಎಂದು ಬಾಯಿ ಬಿಡುವ ಅಧಿಕಾರಿಗಳ ಹಣದಾಹಕ್ಕೆ 6 ತಿಂಗಳಿಂದ ದಾಖಲೆ ಸಿಗದೆ ನೊಂದ ರೈತನೊಬ್ಬ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವುದೇ ಇಲಾಖೆಯಲ್ಲಿನ ಅವ್ಯವಸ್ಥೆಗೆ ಉದಾಹರಣೆಯಾಗಿದೆ ಎಂದು ಆರೋಪಿಸಿದರು.
ಕಾನೂನಾತ್ಮಕವಾಗಿ ಖರೀದಿ ಮಾಡಿರುವ ಜಮೀನುಗಳಿಗೆ ಖಾತೆ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಳೆಯ ಕಾಲದ ಆದೇಶ ಕಾಪಿಯನ್ನೇ ಮುಂದಿಟ್ಟುಕೊಂಡು ಕೆರೆ ರಾಜಕಾಲುವೆಗಳನ್ನು ಭೂಮಾಫಿಯಾದವರಿಗೆ ಮಂಜೂರು ಮಾಡಲು ಮುಂದಾದರೆ, ಕೆರೆ ಉಳಿವಿಗಾಗಿ ಆಯಾ ವ್ಯಾಪ್ತಿಯ ಜನರೇ ದಂಗೆ ಏಳುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಇದರ ಜೊತೆಗೆ ಸರ್ವೇ ನಂ.149/2 ರ ಗುಂಡು ತೋಪನ್ನು ಒತ್ತುವರಿ ಮಾಡಿಕೊಂಡು ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿಕೊಂಡು ರಾಜಾರೋಷವಾಗಿ ಮಾಲೀಕರು ನ್ಯಾಯಾಲಯದಲ್ಲಿ ತಂದಿರುವ ತಡೆಯಾಜ್ಞೆ ತೆರವುಗೊಳಿಸಲು ಸಮರ್ಪಕವಾದ ದಾಖಲೆಗಳನ್ನು ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಕೂಡಲೇ ದಾಖಲೆಗಳನ್ನು ಒದಗಿಸಿ ಒತ್ತುವರಿ ತೆರವುಗೊಳಿಸಬೇಕು.
ಒಟ್ಟಾರೆಯಾಗಿ ಒಂದು ವಾರದ ಒಳಗಾಗಿ ತಾಲೂಕು ಕಚೇರಿ ಅವ್ಯವಸ್ಥೆಯನ್ನು ಸರಿಪಡಿಸಿ ಸರ್ಕಾರಿ ಆಸ್ತಿಗಳಿಗೆ ಅಕ್ರಮ ದಾಖಲಾತಿ ಸೃಷ್ಠಿ ಮಾಡುವ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ, ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ದಾಖಲೆಗಳ ಸಮೇತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಹನ್ಸಾಮರಿಯಾ ತಹಶೀಲ್ದಾರ್‍ರವರ ಗಮನಕ್ಕೆ ತಂದು ಇಲಾಖೆಯಲ್ಲಿ ಕೆಲ ಅವ್ಯವಸ್ಥೆಯ ಜೊತೆಗೆ ದಲ್ಲಾಳಿಗಳ ಹಾವಳಿ ಬಗ್ಗೆ ಸಾರ್ವಜನಿಕರ ದೂರುಗಳು ಹೆಚ್ಚಾಗಿವೆ. ಕೆರೆ, ರಾಜಕಾಲುವೆ, ಗುಂಡುತೋಪು ಅಕ್ರಮದ ಬಗ್ಗೆ ತನಿಖೆ ನಡೆಸಿ ಖಾತೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ಮಾಡುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ರಾಮಸಾಗರ ಸಂದೀಪ್‍ಗೌಡ, ಸಂದೀಪ್‍ರೆಡ್ಡಿ, ಶಿವಾರೆಡ್ಡಿ, ವೆಂಕಟರಮಣಪ್ಪ, ತೆರ್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಗೋವಿಂದಪ್ಪ, ಹರೀಶ್, ಶೈಲ, ಚೌಡಮ್ಮ, ಲಕ್ಷಮ್ಮ, ಚಂದ್ರಪ್ಪ, ಮುಂತಾದವರಿದ್ದರು.