ಕುಂದಾಪುರ, ನ.13: ಕುಂದಾಪುರ ಸಮೀಪದ ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಗಳಿಗೆ ಬೆಂಕಿ ತಗಲಿದ ಘಟನೆ ನ.13 ರಂದು ಸೋಮವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮೀನುಗಾರಿಕಾ ದೋಣಿಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಪಟಾಕಿ ಸಿಡಿತದಿಂದ ಬೆಂಕಿ ಉಂಟಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಒಂದು ದೋಣಿಯಿಂದ ಪ್ರಾರಂಭವಾದ ಬೆಂಕಿಯು ಸ್ವಲ್ಪ ಸಮಯದ ನಂತರ ಹತ್ತಿರದಲ್ಲಿ ಲಂಗರು ಹಾಕಲಾಗಿದ್ದ ಇತರ ಮೀನುಗಾರಿಕಾ ದೋಣಿಗಳಿಗೆ ಹರಡಿತು.ಕುಂದಾಪುರ ಮತ್ತು ಬೈಂದೂರಿನಿಂದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕರಾವಳಿ ಕಾವಲು ಸಿಬ್ಬಂದಿ ಮತ್ತು ಪೊಲೀಸರು ಸಹ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಗ್ನಿ ಅವಘಡದಿಂದ 5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.