ಕೋಲಾರ ಜಿಲ್ಲೆಯಲ್ಲೆ ಮೊದಲ ಸಂಚಾರಿ ರಕ್ತದಾನ ಘಟಕ ಪ್ರಾರಂಭ ರಕ್ತದಾನಿಗಳು ಸದುಪಯೋಗ ಪಡೆಯಲು ಡಿಹೆಚ್‍ಓ ಡಾ.ಜಗದೀಶ್ ಕರೆ

ಕೋಲಾರ:- ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ವತಿಯಿಂದ ಜಿಲ್ಲೆಯಲ್ಲೆ ಮೊಟ್ಟ ಮೊದಲ ಸಂಚಾರಿ ರಕ್ತದಾನ ಘಟಕವನ್ನು ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಪ್ರಾರಂಭಿಸಿದ್ದು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದ ಸದುಪಯೋಗವನ್ನು ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ರವರು ಕರೆ ನೀಡಿದರು.
ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ಸಂಚಾರಿ ರಕ್ತದಾನ ಘಟಕದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಕಾರ್ಲ್ ಲ್ಯಾಂಡ್ ಸ್ಟೀನರ್ ರವರ ಜನ್ಮದಿನದ ಜ್ಞಾಪಕಾಥರ್ವಾಗಿ ಇಡೀ ವಿಶ್ವದಲ್ಲಿ ರಕ್ತದಾನಿಗಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಅವಶ್ಯಕತೆಯಿರುವ ವ್ಯಕ್ತಿಗಳಿಗೆ ರಕ್ತವನ್ನು ಸರಿಯಾದ ವೇಳೆಯಲ್ಲಿ ಪೂರೈಸುವುದು. ತುರ್ತು ಸಮಯದಲ್ಲಿ ವಿತರಿಸಲು ಅವಶ್ಯಕವಾದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ರಕ್ತನಿಧಿ ಘಟಕಗಳಲ್ಲಿ ಶೇಖರಿಸಿಡುವುದಕ್ಕೆ ಸಂಚಾರಿ ರಕ್ತದಾನ ಘಟಕ ಉಪಯುಕ್ತವಾಗಿದೆ, ತುರ್ತು ಸಂದರ್ಭಗಳಲ್ಲಿ ರಕ್ತದಾನಿಗಳು ರಕ್ತ ನಿಧಿ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಸಂಚಾರಿ ರಕ್ತದಾನ ಘಟಕದ ಮೂಲಕ ಸ್ಥಳದಲ್ಲೇ ರಕ್ತದಾನ ಮಾಡಬಹುದಾಗಿದೆ ಈ ರೀತಿಯಾದ ಸಂಚಾರಿ ರಕ್ತದಾನ ಘಟಕಗಳು ಬೆಂಗಳೂರು ಮಹಾ ನಗರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಲಯನ್ಸ್ ರಕ್ತ ನಿಧಿ ಕೇಂದ್ರ ದ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಚಾರಿ ಘಟಕವನ್ನು ಪ್ರಾರಂಭಿಸಿದ್ದು ರಕ್ತದಾನಿಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದಲ್ಲಿ ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ಸಿ.ಆರ್.ಅಶೋಕ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುನಿತಾ, ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಟಿ.ಎಸ್.ಜನಾರ್ಧನ್, ಮುರಳಿ, ಕೆಎಸ್‍ಎಮ್‍ಎಸ್‍ಸಿಎಲ್ ವ್ಯವಸ್ಥಾಪಕರಾದ ಶ್ರೀರಾಮ್, ರೊಟೇರಿಯನ್‍ಗಳಾದ ಬಿಕೆ ದೇವರಾಜ್, ನಾಗಶೇಖರ್, ಡಾ.ಚೇತನ, ತಜ್ಞರಾದ ಪ್ರತಿಭಾ, ಅಜಿತ್, ಅಚ್ಚಯ್ಯ ಶೆಟ್ಟಿ , ಕುರುಬರಪೇಟೆ ವೆಂಕಟೇಶ್, ವಿದ್ಯಾಶ್ರೀ ಮುಂತಾದವರು ಉಪಸ್ಥಿತರಿದ್ದರು.