ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಯಾವುದೇ ಗೊಂದಲಕ್ಕೆಡೆ ನೀಡದಂತೆ ಸೋಮವಾರ ಜಿಲ್ಲೆಯ 8 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಪೂರಕ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಕೇವಲ 45 ಮಂದಿ ಮಾತ್ರ ಗೈರಾಗಿದ್ದರು ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ನಗರದ ಕಾರಂಜಿಕಟ್ಟೆಯ ಸುಭಾಷ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ವತಃ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿ ಕೇಂದ್ರಕ್ಕೆ ಬಿಡಲಾಯಿತು.
ಶಾಲಾ ಪುನರಾವರ್ತಿತ ಅಭ್ಯರ್ಥಿಗಳು 84 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 73 ಮಂದಿ ಹಾಜರಾಗಿ 11 ಮಂದಿ ಮಾತ್ರ ಗೈರಾಗಿದ್ದರು. ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 161 ಮಂದಿ ನೋಂದಾಯಿಸಿದ್ದು ಅವರಲ್ಲಿ 127 ಮಂದಿ ಹಾಜರಾಗಿ 34 ಮಂದಿ ಗೈರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 34 ಮಂದಿ ಗೈರಾದಂತಾಗಿದೆ.
ಬೆಳಗ್ಗೆ 9-30ರಿಂದಲೇ ಕೇಂದ್ರಕ್ಕೆ ಪ್ರವೇಶ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಗುಂಪು ಸೇರುವುದನ್ನು ತಡೆಯಲು 10-30ಕ್ಕಿರುವ ಪರೀಕ್ಷೆಗೆ ಬೆಳಗ್ಗೆ 9-30 ರಿಂದಲೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು.
ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಬರುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸ್ ಹಾಕಿ ಮಾರ್ಗದರ್ಶನ ನೀಡಿ ಕೊಠಡಿಯಲ್ಲಿ ಕುಳಿತು ಓದುವಂತೆ ಕಳುಹಿಸಿಕೊಟ್ಟರು.
ಪರೀಕ್ಷಾ ಕೇಂದ್ರಗಳಿಗೆ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮತ್ತಿತರರು ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದರಲ್ಲದೇ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಲಾಗಿತ್ತು.
ಎಲ್ಲಾ ಕೇಂದ್ರಗಳಲ್ಲೂ ಭದ್ರತೆಗಾಗಿ ಮಹಿಳಾ,ಪುರಷ ಪೊಲೀಸರನ್ನು ನಿಯೋಜಿಸಿದ್ದು, ಎಲ್ಲೂ ಸಮಸ್ಯೆಗಳು ಕಂಡು ಬರಲಿಲ್ಲ. ಈ ಮೊದಲೇ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದರು.