ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಜೂ-7, ಸರ್ಕಾರಿ ಜಮೀನು ಒತ್ತುವರಿ ತೆರೆವು ಮಾಡಲು ನಮ್ಮ ಯಾವುದೇ ಆಭ್ಯಂತರವಿಲ್ಲ, ಆದರೆ ಕೆರೆ ಒತ್ತುವರಿ ನೆಪದಲ್ಲಿ ಬಡ ರೈತ ಮಹಿಳೆ ಟೆಮೋಟೋ ನಾಶ ಮಾಡಿ ಯಲ್ದೂರು ರಾಜಸ್ವ ನಿರೀಕ್ಷಕರಾದ ವಿನೋದ್ ರವರನ್ನು ಕೆಲಸದಿಂದ ವಜಾ ಮಾಡಿ ಅವರ ಆಸ್ತಿ ಹರಾಜು ಹಾಕಿ ನೊಂದ ಮಹಿಳೆಗೆ ಪರಿಹಾರ ನೀಡಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಛೇರಿ ಮುಂದೆ ಹೋರಾಟ ಮಾಡಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದುಬಾರಿಯಾಗಿರುವ ಕೃಷಿ ಕ್ಷೇತ್ರದ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳ ಜೊತೆಗೆ ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪದಿಂದ ತತ್ತರಿಸಿರುವ ರೈತರು ಖಾಸಗಿ ಸಾಲಕ್ಕೆ ಸಿಲುಕಿ ಒದ್ದಾಡುತ್ತಿರುವ ಪರಿಸ್ತಿತಿಯಲ್ಲಿ ಕೇವಲ 10 ಗುಂಟೆ ಕೆರೆ ಒತ್ತುವರಿ ನೆಪದಲ್ಲಿ ತಮ್ಮ ಪೌರುಷವನ್ನು ಬಡ ಮಹಿಳೆಯ ಟೆಮೋಟೋ ತೋಟದ ಮೇಲೆ ದರ್ಪ ತೋರಿಸಿರುವ ಕಂದಾಯ ಅಧಿಕಾರಿ ವಿನೋದ ರವರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಬೇಕೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯ ಮಾಡಿದರು.
ರೈತರ ಬೆವರ ಹನಿ ಹಾಗೂ ತಿನ್ನುವ ಅನ್ನದ ಋಣ ತಿಳಿಯದ ಅಧಿಕಾರ ದರ್ಪ ತೋರಿಸಿರುವುದು ಬಡ ಮಹಿಳೆಯ ಮೆಲೆ ಅಲ್ಲ ತಾಕತ್ತಿದ್ದರೆ ತಾಲ್ಲೂಕು ಆದ್ಯಂತ ಒತ್ತುವರಿ ಆಗಿರುವ ಕೆರೆ, ಗುಂಡುತೋಪು, ಗೋಮಾಳ ರಾಜಕಾಲುವೆಗಳನ್ನು ತೆರವುಗೊಳಿಸಿ ತನ್ನ ಅಧಿಕಾರ ನಿಷ್ಟೆಯನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಜಿಲ್ಲೆಯ ಜೀವನಾಡಿಗಳಾಗಿರುವ ಕೆರೆ ಒತ್ತುವರಿ ತೆರವುಗೊಳಿಸುವುದಕ್ಕೆ ನಮ್ಮ ಅಭ್ಯಂತರ ವಿಲ್ಲ. ಆದರೆ ಮಾನವೀಯತೆ ಇಲ್ಲದೆ ನೆರ್ನಹಳ್ಳಿ ಗ್ರಾಮದ ಶಾಂತಮ್ಮ ಕೇವಲ 10 ಗುಂಟೆ ಕೆರೆ ಒತ್ತುವರಿಯಾಗಿದೆ ಎಂಬ ಆರೋಪದಲ್ಲಿ ಸರ್ವೆ ಮಾಡಿಸದೆ ಏಕಾ ಏಕಿ ಜೆ.ಸಿ.ಬಿ ಮುಖಾಂತರ ಟೆಮೋಟೋ ಬೆಳೆಯನ್ನು ನಾಶ ಮಾಡುವ ಮುಖಾಂತರ ರೈತರ ತಾಳ್ಮೆಯನ್ನು ಕಂದಾಯ ಅಧಿಕಾರಿ ವಿನೋದ ರವರು ಕೆಣಕಿದ್ದಾರೆಂದು ಕಂದಾಯ ಅಧಿಕಾರಿ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಅದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಶ್ರೀಮಂತರು ರಾಜಕಾರಣಿಗಳು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವ ಕೆರೆಗಳಿಗೆ ಇದೇ ಕಂದಾಯ ಅಧಿಕಾರಿಗಳು ಪಹಣಿ, ಖಾತೆ, ಮಾಡಿಕೊಳ್ಳುವ ಮುಖಾಂತರ ಕೆರೆ ನಾಶ ಮಾಡಿರುವುದು ನೂರೊಂದು ಉದಾಹರಣೆಗಳು ಜಿಲ್ಲಾಧಿಕಾರಿಗಳ ಟೇಬಲ್ ಮೇಲೆ ಕಡತಗಳು ದೂಳು ಹಿಡಿಯುತ್ತಿವೆ. ಆದರೂ ಕೆರೆ ಒತ್ತುವರಿ ಮಾಡಿಕೊಂಡಿರುವುದು ರೈತ ಮಹಿಳೆಯ ತಪ್ಪೆ. ಕಷ್ಟಾಪಟ್ಟು ಟೆಮೋಟೋ ಬೆಳೆ ಹಾಕಿರುವಾಗ ಕಂದಾಯ ಅಧಿಕಾರಿಗಳು ನೋಟೀಸ್ ಜಾರಿ ಮಾಡಿ ಬೆಳೆ ಆದ ನಂತರ ಒತ್ತುವರಿ ತೆರವುಗೊಳಿಸಿದ್ದರೆ ಅದಕ್ಕೆ ಮಾನವೀಯತೆ ಮೌಲ್ಯ ಇರುತ್ತಿತ್ತು. ಏಕಾಏಕಿ ತಮ್ಮ ಉತ್ತರ ಕುಮಾರ ಪೌರುಷವನ್ನು ಬಡ ಮಹಿಳೆಯ ತೋಟದ ಮೇಲೆ ತೋರಿಸಿರುವುದು ಯಾವ ನ್ಯಾಯ ಎಂದು ತಾಲ್ಲೂಕು ಆಡಳಿತವನ್ನು ಪ್ರಶ್ನೆ ಮಾಡಿದರು.
ಯಲ್ದೂರು ವ್ಯಾಪ್ತಿಯ ಕೆರೆ ರಾಜಕಾಲುವೆ ಗುಂಡುತೋಪು, ಗೋಮಾಳ ಇದೇ ಕಂದಾಯ ಅಧಿಕಾರಿ ವಿನೋದ್ ರವರು ನೂರಾರು ಎಕರೆಗೆ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಹಣವನ್ನು ಬೆಂಗಳೂರು ರಿಯಲ್ ಎಸ್ಟೇಟ್ ಉದ್ದಿಮೆಗಳು ಹಾಗೂ ಸ್ಥಳೀಯ ಪ್ರಭಾವಿ ರಾಜಕಾರಣಿಗಳಿಗೆ ತಮ್ಮ ಅಧಿಕಾರವನ್ನು ಅಡ ಇಟ್ಟಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆ. ಕೂಡಲೇ ಇವರ ಅವಧಿಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿರುವ ಸ್ಥಳಗಳಲ್ಲಿ ನಡೆದಿರುವ ಭೂಮಾಪಿಯವನ್ನು ತನಿಖೆ ಮಾಡಿ ಕೆರೆ ಒತ್ತುವರಿ ನೆಪದಲ್ಲಿ ಬಡ ಮಹಿಳೆಯ ಟೆಮೋಟೋವನ್ನು ನಾಶ ಮಾಡಿರುವ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡು ಈ ಅಧಿಕಾರಿಯ ಆಸ್ತಿಯನ್ನು ಹರಾಜು ಹಾಕಿ ನೊಂದ ಬಡ ಮಹಿಳೆಗೆ ಪರಿಹಾರ ನೀಡಬೇಕೆಂದು ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಜಿಲ್ಲಾಧಿಕಾರಿಗಳ ಆದೇಶವನ್ನು ಕಂದಾಯ ಅಧಿಕಾರಿಗಳಾದ ವಿನೋದ್ ರವರು ಉಲ್ಲಂಘನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಡ ರೈತ ಮಹಿಳೆಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಷೇಕ್ಷಪಿವುಲ್ಲಾ, ದ್ಯಾವಂಡಹಳ್ಳಿ ರಾಜೇಂದ್ರ, ಕೊಳ್ಳೂರು ವೆಂಕಟ್, ಕುಪ್ಪಳ್ಳಿ ನಾರಾಯಣಸ್ವಾಮಿ, ಆಚಂಪಲ್ಲಿ ಗಂಗಾದರ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ ಮುಂತಾದವರು ಇದ್ದರು.