ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ,ಸೆ-28, ಜಿಲ್ಲಾದ್ಯಂತ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಗಳ ಟೇಬಲ್ ಮೇಲೆ ದೂಳು ಹಿಡಿಯುತ್ತಿರುವ ಲಕ್ಷಾಂತರ ಅರ್ಜಿಗಳಿಗೆ ಮುಕ್ತಿ ನೀಡಬೇಕೆಂದು ಸಾಮೂಹಿಕ ನಾಯಕತ್ವದ ರೈತ ಸಂಘದಿಂದ ಸರ್ವೆ ಇಲಾಖೆ ಉಪ ನಿರ್ದೇಶಕರಾದ ಭಾಗ್ಯಮ್ಮ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಸರ್ವೆ ಇಲಾಖೆಯಲ್ಲಿ ಯಾರ ಒತ್ತಡ ಅಧಿಕಾರಿಗಳಿಗೆ ಇದಿಯೋ ಗೊತ್ತಿಲ್ಲ. ಕೋಲಾರ ಜಿಲ್ಲೆಯ ಸರ್ವೆ ಇಲಾಖೆಗೆ ಅಧಿಕಾರಿಗಳು ಬರಬೇಕಾದರೆ ಭಯಬೀತರಾಗಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ. ಜೊತೆಗೆ ಜಿಲ್ಲಾದ್ಯಂತ 30 ಜನ ಅಧಿಕಾರಿಗಳು ಏಕ ಕಾಲದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲು ಕಾರಣವನ್ನು ಹುಡುಕಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ದೂಳು ಹಿಡಿಯುತ್ತಿರುವ ಲಕ್ಷಾಂತರ ಅರ್ಜಿಗಳನ್ನು ವಿಲೇವಾರಿ ಮಾಡಿ 30 ದಿನಗಳೊಳಗೆ ಸಮಸ್ಯೆಯನ್ನು ಬಗೆ ಹರಿಸದೇ ಹೋದರೆ ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ಮಾಡುವ ಎಚ್ಚರಿಕೆಯನ್ನು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೋಟಿ ಕೋಟಿ ಹಣದ ಆದಾಯ ಬರುವ ಪಿನಂಬರ್ ಮುಕ್ತಿಗೊಳಿಸಲು ರಾಜಕಾರಣಿಗಳ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳ ಜಮೀನುಗಳನ್ನು ಸರ್ವೆ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದಿಲ್ಲ. ಆದರೆ ಬಡ ರೈತರು ಸಲ್ಲಿಸಿರುವ ಅರ್ಜಿ ವಿಲೇವಾರಿ ಮಾಡಲು ಸಿಬ್ಬಂದಿ ಕೊರತೆ ಹಾಗೂ ನಿಯಮದ ಪ್ರಕಾರ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಇಲಾಖೆಯಲ್ಲಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಸರ್ಕಾರಗಳಲ್ಲಿ ಮುಖ್ಯ ಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಬದಲಾವಣೆ ಆಗುತ್ತಿರುತ್ತಾರೆ. ಆದರೆ ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಪ್ರತಿಯೊಂದು ಸಮಸ್ಯೆಗೂ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ಇದೆ. ಅದರಲ್ಲಿ ಪ್ರಮುಖವಾಗಿ ರೈತರ ಒಡನಾಡಿಯಾಗಿರುವ ಸರ್ವೆ ಇಲಾಖೆಯಲ್ಲಿನ ಹತ್ತಾರು ವರ್ಷಗಳಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಇತ್ತೀಚೆಗೆ ಇಲಾಖೆಯಲ್ಲಿ ಸಿಬ್ಬಂದಿ ಖಾಲಿ ಇದೆ ಎಂಬ ನೆಪದಲ್ಲಿ ರೈತರು ಮತ್ತು ಜನ ಸಾಮಾನ್ಯರು ಕೃಷಿ ಹಾಗೂ ವಿವಿಧ ಆಸ್ತಿಗಳ ಹದ್ದುಬಸ್ತು ಬಿನ್ ಸೇತ್ಕೀ, ತಾತ್ಕಾಲಿ ಪೋಡಿ ಇ-ಸ್ವತ್ತು ಸೇರಿದಂತೆ ಜಮೀನು ಸರ್ವೆಗಾಗಿ ಸಾವಿರಾರು ಜನ ರೈತರು ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಇದುವರೆಗೂ ಅರ್ಜಿ ವಿಲೇವರಿ ಆಗುತ್ತಿಲ್ಲ. ಅರ್ಜಿದಾರರು ಇಲಾಖೆಗೆ ಅಲೆದಾಡಿ ಸುಸ್ತಾಗಿ ಸರ್ವೆ ಇಲಾಖೆ ಜಿಲ್ಲೆಯ ಜನರ ಪಾಲಿಗೆ ಇಲ್ಲದಂತಾಗಿದೆ ಎಂದು ಇಡೀ ಶಾಪವಾಗುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಆಕ್ರೋಷ್ಯ ವ್ಯಕ್ತಪಡಿಸಿದರು.
ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಇ-ಆಸ್ತಿ ಖಾತೆ ಬದಲಾವಣೆ ಆಸ್ತಿ ವರ್ಗಾವಣೆಗೆ ಸರ್ವೆಸ್ಕೆಚ್ ಕಡ್ಡಾಯವಾಗಿದೆ. ಸಕಾಲದಲ್ಲಿ ಸರ್ವೆಕಾರ್ಯ ನಡೆಯದ ಕಾರಣ ರೈತರಿಗೆ ಅಗತ್ಯ ದಾಖಲೆಗಳು ದೊರೆಯದಾಗಿವೆ. ಜೊತೆಗೆ ನಕ್ಷೆ ಹದ್ದುಬಸ್ತು ಗುರುತಿಸುವಿಕೆ ಜಮೀನು ಖರೀದಿ ಮಾರಾಟ ದಾನ ನೀಡಿಕೆ ಪೋಡಿ ಪ್ರಕ್ರಿಯೆ ಪ್ರಮಾಣ ಕಡಿಮೆಯಾಗಿದೆ. ಹಿಸ್ಸಾ ಪ್ರಕ್ರಿಯೆ ಹಕ್ಕು ಬದಲಾವಣೆಗೂ ತೊಂದರೆಗಳು ಅನುಭವಿಸುತ್ತಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರೈತರು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಸರ್ವೆಸ್ಕೆಚ್ಗೆ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿದ್ದು, ಮೇಲ್ವಿಚಾರಕರ ಟೇಬಲ್ನಲ್ಲಿಯೇ ದೂಳು ಹಿಡಿಯುತ್ತಿದೆ. ಆರ್.ಟಿ.ಸಿ. ಹಾಗೂ ಪಿನಂಬರ್ ದುರಸ್ಥಿಗೆ ಸಾವಿರಾರು ರೈತರು ಅರ್ಜಿ ಸಲ್ಲಿಸಿ, ತಹಸೀಲ್ದಾರ್ ರವರ ಕಛೇರಿ ಬಳಿ ಜಾತಕ ಪಕ್ಷಗಳಂತೆ ಕಾದು ಸಾಕಾಗಿದೆ ಎಂದು ಅಧಿಕಾರಿಗಳ ವಿರುದ್ದ ಆರೋಪ ಮಾಡಿದರು.
ರೈತರು ಸರ್ವೆ ಇಲಾಖೆಗೆ ಸಲ್ಲಿಸುವ ಯಾವುದೇ ಅರ್ಜಿ 30 ದಿನಗಳಲ್ಲಿ ವಿಲೆವಾರಿಯಾಗಿ ಅರ್ಜಿಯ ಸಮಸ್ಯೆ ಇತ್ಯರ್ತವಾಗಬೇಕು. ಆದರೆ ಇಲಾಖೆಯಲ್ಲಿನ ಸಿಬ್ಬಂದಿ ಕೊರೆತೆಯಿಂದ ಇರುವ ಸಿಬ್ಬಂದಿಗೆ ಮಾನಸಿಕ ಹಾಗೂ ಕೆಲಸದ ಒತ್ತಡ ಮತ್ತು ಒತ್ತುವರಿಯಾಗಿರುವ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡುತೋಪು, ಹೈಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಇರುವ ಸಿಬ್ಬಂದಿ ಸೀಮಿತವಾಗಿದ್ದಾರೆ. ಮತ್ತೊಂದಡೆ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ದಿ ಜಮೀನು ವಿವಾದಗಳು, ಸ್ಮಶಾನ ರಸ್ತೆಗಳ ಒತ್ತುವರಿ ತೆರವುಗೊಳಿಸಲು ಕೆಲವು ಸರ್ವೆ ಇಲಾಖೆ ಅಧಿಕಾರಿಗಳು ಸೀಮಿತವಾಗಿದೆ. ಒಟ್ಟಾರೆಯಾಗಿ ಜಿಲ್ಲಾದ್ಯಂತ ಸರ್ವೆ ಇಲಾಖೆ ಎಂಬುದು ರೈತರ ಹಾಗೂ ಜನ ಸಾಮಾನ್ಯರ ಪಾಲಿಗೆ ಇದ್ದು ಇಲ್ಲದಂತ ಇಲಾಖೆಯಾಗಿ ಮಾರ್ಪಟ್ಟಿದೆ. ಮಾನ್ಯ ಕಂದಾಯ ಸಚಿವರು ಜಿಲ್ಲಾದ್ಯಂತ ಖಾಲಿ ಇರುವ ಸರ್ವೆ ಇಲಾಖೆ ಹುದ್ದೆಗಳನ್ನು ಭರ್ತಿ ಮಾಡಿ ಟೇಬಲ್ಗಳಲ್ಲಿ ದೂಳು ಹಿಡಿಯುತ್ತಿರುವ ಲಕ್ಷಾಂತರ ಅರ್ಜಿಗಳಿಗೆ ಮುಕ್ತಿ ಕೊಡಿಸಿ ವರ್ಷಾನುಗಟ್ಟಲೆ ರೈತರು ಹಾಗೂ ಜನ ಸಾಮಾನ್ಯರು ಇಲಾಖೆಗೆ ಅಲೆದಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಮಾನ್ಯರಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಭಾಗ್ಯಮ್ಮ ರವರು ಭೂ ಮಾಪಕರ ಇಲಾಖೆ ಅಧಿಕಾರಿಗಳು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅದರಿಂದ ರೈತರ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಆಗುತ್ತಿಲ್ಲ. ಸಿಬ್ಬಂದಿ ಭರ್ತಿ ಮಾಡುವಂತೆ ಸರ್ಕಾರಕ್ಕೆ ನಿಮ್ಮ ಮನವಿಯನ್ನು ತಲುಪಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ಮೂರಂಡಹಳ್ಳಿ ಶಿವಾರೆಡ್ಡಿ, ಯಲ್ಲಪ್ಪ, ಹರೀಶ್, ಹ.ಸೆ.ಜಿಲ್ಲಾಧ್ಯಕ್ಷ ಕಿರಣ್, ರಾಮಕೃಷ್ಣಪ್ಪ, ಚಂದ್ರಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಅಶ್ವಥಪ್ಪ, ನಳಿನಿ.ವಿ, ಚೌಡಮ್ಮ, ಹೆಬ್ಬಣಿ ಆನಂದರೆಡ್ಡಿ, ಸುಪ್ರೀಂಚಲ, ಚಾಂದ್ಪಾಷ, ತೆರ್ನಹಳ್ಳಿ ಆಂಜಿನಪ್ಪ, ರಾಮಕೃಷ್ಣಪ್ಪ, ಚೆನ್ನಬಸಪ್ಪ, ಮುನಿಯಮ್ಮ, ಶಾಂತಮ್ಮ, ನಾಗವೇಣಿ, ಭಾಗ್ಯ, ಮುಂತಾದವರು ಇದ್ದರು.