ಶ್ರೀನಿವಾಸಪುರ; ಜು.26: ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅರಣ್ಯ ಭೂಮಿಯನ್ನು ಉಳಿಸುವಂತೆ ರೈತಸಂಘದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಲಾಯಿತು.
ಅರಣ್ಯ ಇಲಾಖೆ ಸಚಿವರಿಗೆ, ವಲಯ ಅರಣ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಧಿಕಾರ, ರಾಜಕೀಯ ಬಲವಿದ್ದರೆ ಕೆರೆ, ಕುಂಟೆ ಜೊತೆಗೆ ಅರಣ್ಯ ಭೂಮಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಶ್ರೀನಿವಾಸಪುರ ತಾಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿ ಪ್ರಭಾವಿ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಒತ್ತುವರಿ ಮಾಡಿಕೊಂಡಿರುವುದೇ ಸಾಕ್ಷಿಯಾಗಿದೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷಿ ಇದ್ದರೂ ಬಲಾಢ್ಯರ ಮುಂದೆ ಅರಣ್ಯ ಅಧಿಕಾರಿಗಳು ನಿಂತುಕೊಳ್ಳಲು ಬೆವರುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಣ್ಣಪುಟ್ಟ ಅನಕ್ಷರಸ್ಥ ಅಮಾಯಕ ರೈತರು 2 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡರೆ ಆ ಸಮಸ್ಯೆಯನ್ನೇ ದೊಡ್ಡದಾಗಿ ಬಿಂಬಿಸಿ ನೂರಾರು ಪೊಲೀಸರ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಲು ಸಿಂಹದಂತೆ ಮುನ್ನುಗ್ಗುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಗೆ ಕಂದಾಯ ಸರ್ವೇ ಅಧಿಕಾರಿಗಳು ದಾಖಲೆಗಳನ್ನು ಸೃಷ್ಠಿ ಮಾಡಿ ಒತ್ತುವರಿದಾರರಿಗೆ ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವವರ ವಿರುದ್ಧ ಕ್ರಮವಿಲ್ಲವೇ ಎಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಒತ್ತುವರಿದಾರರು ಅರಣ್ಯ ಭೂಮಿಯ ದಾಖಲೆಗಳನ್ನೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಅಡವಿಟ್ಟು ಕೋಟಿಕೋಟಿ ಸಾಲ ಪಡೆದಿದ್ದರೂ ತಾವುಗಳು ಮೌನವೇಕೆ. ಬಲಾಢ್ಯರಿಗೆ ಒಂದು ನ್ಯಾಯ, ಅಮಾಯಕ ಅನ್ನದಾತರಿಗೆ ಒಂದು ನ್ಯಾಯವೇ. ಇದು ನಮ್ಮ ಪ್ರಶ್ನೆ. ಎಲ್ಲಾ ದಾಖಲೆಗಳ ಸಮೇತ ಒತ್ತುವರಿಯಾಗಿರುವ ಅರಣ್ಯ ಭೂಮಿಯ ಬಗ್ಗೆ ಮಾಹಿತಿ ಇದ್ದರೂ ಒತ್ತುವರಿದಾರರಿಗೆ ಹಿರಿಯ ಅಧಿಕಾರಿಗಳು ರಕ್ಷಣೆ ನೀಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಒಂದು ವಾರದ ಒಳಗೆ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ, ಅರಣ್ಯ ಭೂಮಿಯನ್ನು ಉಳಿಸಬೇಕಿದ್ದು, ಇಲ್ಲವಾದರೆ ಮರಗಳ ಸಮೇತ ಅರಣ್ಯ ಸಚಿವರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳು, ಒತ್ತುವರಿದಾರರ ವಿರುದ್ಧ ಈಗಾಗಲೇ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗ ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಲವಾಟಿ ಶಿವ, ಷೇಕ್ ಷಫೀಉಲ್ಲಾ, ಸಹದೇವಣ್ಣ, ಮುನಿರಾಜು, ಫಾರೂಖ್ ಪಾಷ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್ಪಾಲ್, ವಿಶ್ವ ಮುಂತಾದವರಿದ್ದರು.