ಶ್ರೀನಿವಾಸಪುರ ತಾಲ್ಲೂಕಿನ ತರ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಸಮಗ್ರ ಬೆಳೆ ನಿರ್ವಹಣೆ ಅಡಿಯಲ್ಲಿ ಮಾವು ಬೆಳೆ ಕ್ಷೇತ್ರೋತ್ಸವ

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ವತಿಯಿಂದ ಶ್ರೀನಿವಾಸಪುರ ತಾಲ್ಲೂಕಿನ ತರ್ನಹಳ್ಳಿ ಗ್ರಾಮದಲ್ಲಿ “ಸಮಗ್ರ ಬೆಳೆ ನಿರ್ವಹಣೆ” ಅಡಿಯಲ್ಲಿ ಮಾವು ಬೆಳೆಯ ಕ್ಷೇತ್ರೋತ್ಸವ ನಡೆಸಲಾಯಿತು. ಗ್ರಾಮದ ಮಂಜುನಾಥ್ ಎಂಬ ರೈತರ ಮಾವಿನ ತೋಟದಲ್ಲಿ ಕಳೆದ ವರ್ಷ ಸಮಗ್ರ ಬೆಳೆ ನಿರ್ವಹಣೆ ಅಡಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡಿದ್ದು ಅದರ ಅಡಿಯಲ್ಲಿ “ಮಾವು ಬೆಳೆಯ ಕ್ಷೇತ್ರೋತ್ಸವ” ನಡೆಸಲಾಯಿತು. ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕ್ರಮಗಳನ್ನು ಅನುಸರಿಸಿದ ತರ್ನಹಳ್ಳಿ ಗ್ರಾಮದ ಮಂಜುನಾಥರವರು ತಮ್ಮ ಮಾವಿನ ತೋಟದಲ್ಲಿ ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆದು, ಮಾರುಕಟ್ಟೆಯಲ್ಲಿ ತಮ್ಮ ತೋಟದ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಹೆಚ್ಚು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದ ಇತರ ರೈತರುಗಳಿಗೆ ಮಾದರಿಯಾಗಿದ್ದಾರೆ.
ಸಮಗ್ರ ಬೆಳೆ ನಿರ್ವಹಣೆ ಪದ್ಧತಿಗಳಾದ ಪೂರ್ಣ ಕಟಾವಿನ ನಂತರ ತೋಟವನ್ನು ಸ್ವಚ್ಛವಾಗಿಡುವುದು, ಚಾಟನಿ ಮಾಡುವುದು, ಮಾಗಿ ಉಳುಮೆ ಮಾಡುವುದು, ಹಸಿರೆಲೆ ಗೊಬ್ಬರದ ಗಿಡಗಳಾದ ಸೆಣಬು, ಹುರಳಿ, ಮುಕುನ ಹಾಗೂ ಇನ್ನಿತರವುಗಳನ್ನು ಸಾಲುಗಳಲ್ಲಿ ಬೆಳೆದು, ಅವುಗಳು ಹೂಬಿಡುವ ಸಮಯದಲ್ಲಿ ಮಣ್ಣಿಗೆ ಸೇರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು, ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಕಾಂಡ ಕೊರಕ ಹುಳುವಿನ ನಿರ್ವಹಣೆ ಮಾಡುವುದು, ಲಘು ಪೋಷಕಾಂಶದ ಮಿಶ್ರಣವಾದ “ಮಾವು ಸ್ಪೆಶಲ್” ಮಿಶ್ರಣವನ್ನು ಪ್ರತಿ ಲೀ. ನಿರಿಗೆ 4 ಗ್ರಾಂ. ಬೆರೆಸಿ ಹೂ ಬಿಡುವ ಮುನ್ನ ಹಾಗೂ ಕಾಯಿ ಕಚ್ಚಿದ ನಂತರ ಸಿಂಪಡಿಸುವುದು (ತಲಾ ಎರಡರಂತೆ ನಾಲ್ಕು ಬಾರಿ), ಪ್ರಮುಖ ರೋಗ ಕೀಟಗಳಾದ ಜಿಗಿ ಹುಳು, ಹಣ್ಣಿನ ನೊಣ (ಆಕರ್ಷಕ ಬಲೆ ತೂಗುಹಾಕುವುದು), ಬೂದು ರೋಗ, ಹೂ ಅಂಗಮಾರಿ ರೋಗ, ಚಿಬ್ಬು ರೋಗ ಇನ್ನಿತರವುಗಳನ್ನು ಸಮಗ್ರ ರೀತಿಯಲ್ಲಿ ಕಾಲಕಾಲಕ್ಕೆ ನಿರ್ವಹಣೆ ಮಾಡುವುದು, ಕೊಯ್ಲು ಯಂತ್ರವನ್ನು ಉಪಯೋಗಿಸಿ ವೈಜ್ಞಾನಿಕ ರೀತಿಯಲ್ಲಿ ಹಣ್ಣುಗಳನ್ನು ಕಟಾವು ಮಾಡುವುದರಿಂದ ರೈತರು ಉತ್ತಮ ಗುಣಮಟ್ಟದ ಅಧಿಕ ಇಳುವರಿಯನ್ನು ಪಡೆದು, ಹೆಚ್ಚು ಲಾಭವನ್ನು ಗಳಿಸಬಹುದುದಾಗಿದೆ ಎಂದು ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಕಟ್ಟೆಗೌಡರ್ ಮಾತಾನಾಡಿ ತಿಳಿಸಿದರು.

ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಶಿವಾನಂದ ಹೊಂಗಲ್ ರವರು ಮಾತನಾಡಿ ಮಾವು ಬೆಳೆಯುವ ಪ್ರತಿ ರೈತರು ಕೂಡ ಸಮಗ್ರ ಬೆಳೆ ನಿರ್ವಹಣೆ ಪದ್ಧತಿಗಳನ್ನು ಅನುಸರಿಸಿ ಹೆಚ್ಚು ಲಾಭವನ್ನು ಪಡೆಯಬೇಕೆಂದು ಸಲಹೆ ನೀಡಿದರು. ಡಾ. ಆಶಾ, ಕೆ.ಎಂ., ತೋಟಗಾರಿಕಾ ವಿಜ್ಞಾನಿ ಮಾವಿನ ಸಮಗ್ರ ಬೆಳೆ ಪದ್ಧತಿಗಳ ಬಗ್ಗೆ ಮಾತನಾಡುತ್ತ ಮುಕುನ ಬೆಳೆದು ಮಣ್ಣಿಗೆ ಸೇರಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಹಾಗೂ ವೈಜ್ಞಾನಿಕವಾಗಿ ಚಾಟನಿ ಮಾಡುವ ಮೂಲಕ ಹಳೆಯ ಮರಗಳ ಪುನರುಜ್ಜೀವನಗೊಳಿಸುವ ಮಹತ್ವದ ಕುರಿತಾದ ತಾಂತ್ರಿಕ ಮಾಹಿತಿಯನ್ನು ಹಂಚಿಕೊಂಡರು. ಡಾ. ಚಿಕ್ಕಣ್ಣ, ಜಿ.ಎಸ್., (ಗೃಹ ವಿಜ್ಞಾನಿ) ಮಾತನಾಡಿ ವೈಜ್ಞಾನಿಕ ಮಾವಿನ ಕೊಯ್ಲು ಹಾಗೂ ಹಣ್ಣು ಮಾಗುವಿಸುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದರು. ಡಾ. ಸದಾನಂದ ಮುಶ್ರಿಫ್‍ರವರು (ಸಸ್ಯ ರೋಗ ವಿಜ್ಞಾನಿ) ಮಾವಿನಲ್ಲಿ ಬರುವ ಮುಖ್ಯ ರೋಗ, ಕೀಟಗಳ ಗುಣ ಲಕ್ಷಣ ಹಾಗೂ ಅವುಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡುವುದರ ಜೊತೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾವು ಬೆಳೆಗಾರರಿಗೆ ಬಾದಿರುತ್ತಿರುವ ಹೊಸ ರೀತಿಯ ರೋಗವಾದ ಹಣ್ಣುಗಳ ಮೇಲೆ ಕಪ್ಪು ಮಚ್ಚೆರೋಗದ ಬಗ್ಗೆ ಮಾತನಾಡಿ, ಅದರ ನಿರ್ವಹಣೆಯನ್ನು ತಿಳಿಸುತ್ತ, ಆ ರೋಗದ ಹೆಚ್ಚಿನ ಸಂಶೋಧನೆ ನೆಡಯುತ್ತಿದ್ದು ಮುಂದಿನ ವರ್ಷದಲ್ಲಿ ರೈತರು ಉತ್ತಮ ನಿರ್ವಹಣಾ ಕ್ರಮಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಶ್ರೀನಿವಾಸಪುರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಡಾ. ಶ್ರೀನಿವಾಸನ್‍ರವರು ಮಾತನಾಡಿ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು. ಕೊನೆಯದಾಗಿ ಫಲಾನುಭವಿ ರೈತರಾದ ಮಂಜುನಾಥ್‍ರವರು ಮಾತನಾಡಿ ಸಮಗ್ರ ಬೆಳೆ ಪದ್ಧತಿಗಳನ್ನು ಅನುಸರಿಸಿ, ಉತ್ತಮ ಗುಣ್ಣಮಟ್ಟದ ಇಳುವರಿಯನ್ನು ಪಡೆದಿರುವುದಾಗಿ, ಹಾಗೂ ಅವರ ತೋಟದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ತಮ್ಮ ಅನಿಕೆಯನ್ನು ಹಂಚಿಕೊಂಡರು. ದಟ್ಟವಾಗಿ ಬೆಳೆದ ಹಳೆಯ ಮಾವಿನ ಮರಗಳಲ್ಲಿ ಚಾಟನಿ ಮಾಡಿರುವ ಕಾರಣ ಒಳ ರೆಂಬೆಗಳಲ್ಲೂ ಕಾಯಿ ಕಚ್ಚಿರುವ ಬಗ್ಗೆ ವಿಷೇಶ ಮಾಹಿತಿಯನ್ನು ವ್ಯಕ್ತಪಡಿಸಿದರು. ತರ್ನಹಳ್ಳಿ ಹಾಗೂ ಸುತ್ತಮುತ್ತ ಗ್ರಾಮದ ಸುಮಾರು 35ಕ್ಕೂ ಅಧಿಕ ಮಾವು ಬೆಳೆಗಾರರು ಉಪಸ್ಥಿತರಿದ್ದು ಸದರಿ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.