ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ದೇಶದ ಸ್ತ್ರೀಯರು ಸ್ವಾವಲಂಬಿ ಜೀವನ ನಡೆಸಲು ಸ್ತ್ರೀ ಶಕ್ತಿಗಳು ಅತ್ಯಗತ್ಯವಾಗಿದ್ದು , ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಮೂಲಕ ಸಹಾಯಧನವನ್ನು ಹಾಗೂ ಸಾಲ ಸೌಲಭ್ಯವನ್ನು ನೀಡುತ್ತಿವೆ ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ತಿಳಿಸಿದರು . ಇಂದು ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಸ್ತ್ರೀ ಶಕ್ತಿ ಮಹಿಳಾ ಸಮಾವೇಶ , ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಪ್ತಾಹ ಮತ್ತು ಪೋಷಣ್ ಅಭಿಯಾನ ಯೋಜನೆಯ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ 5012 ಸಂಘಗಳಿದ್ದು 78,720 ಪಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 12.60 ಕೋಟಿ ಸಾಲ ಸೌಲಭ್ಯವನ್ನು ನೀಡಲಾಗಿದೆ . ಸಾಲ ವಿತರಣೆಯಲ್ಲಿ ಲೋಪಗಳಾದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ತಿಳಿಸಿದರು . ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪುರುಷರಿಗೆ ಉದ್ಯೋಗವಿಲ್ಲದಿದ್ದರೂ ಸ್ತ್ರೀಯರು ಸ್ವ ಸಹಾಯ ಸಂಘಗಳ ಮೂಲಕ ಸಾಲ ಪಡೆದು ಕುಟುಂಬ ನಿರ್ವಹಣೆ ಮಾಡಿದ್ದಾರೆ . ಬ್ಯಾಂಕುಗಳು ಕರೋನಾ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿರುವ ಸಾಲವನ್ನು ಮರುಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ . ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಿಗೆ ಸಮಾನವಾಗಿದ್ದಾರೆ ಎಂದರು . ವಿದ್ಯಾಸಿರಿ ಯೋಜನೆಯಡಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ರಾಜ್ಯ ಸರ್ಕಾರ ನೀಡುತ್ತಿದೆ . ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ 6000 ಹಾಗೂ ರಾಜ್ಯ ಸರ್ಕಾರ 4000 ಸಹಾಯಧನ ನೀಡುತ್ತಿದೆ . ದೇಶದ ಜನತೆಯನ್ನು ಕರೋನಾ ಇಂದ ರಕ್ಷಿಸಲು ಕರೋನಾ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಕುಡಾ ಅಧ್ಯಕ್ಷರಾದ ಚಲಪತಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ ಸೇರಿದಂತೆ ಅಧಿಕಾರಿಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು .