ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸದಾ ಶ್ರಮಿಸುತ್ತಿರುವ ಶಿಕ್ಷಕ ಗೆಳೆಯರ ಬಳಗ ತನ್ನ ಕಾಯಕ ನಿರಂತರವಾಗಿ ಮುಂದುವರೆಸಿ, ಮತ್ತಷ್ಟು ಶಾಲೆಗಳ ಸಮಗ್ರ ಅಭಿವೃದ್ದಿಗೆ ಕಾರಣವಾಗಲಿ ಎಂದು ಕೋಲಾರ ಪ್ರಭಾರ ಬಿಇಒ ಆಗಿದ್ದು, ಈಗ ಮಾಲೂರು ಬಾಲಕರ ಪಿಯು ಕಾಲೇಜು ಉಪಪ್ರಾಂಶುಪಾಲರಾಗಿ ವರ್ಗಾವಣೆಯಾಗಿರುವ ರಾಮಕೃ ಷ್ಣಪ್ಪ ಕರೆ ನೀಡಿದರು.
ನಗರದ ಸ್ಕೌಟ್ಸ್‍ಗೈಡ್ಸ್ ಭವನದಲ್ಲಿ ಶಿಕ್ಷಕ ಗೆಳೆಯರ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಡೀ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಕಳೆದ 10 ವರ್ಷಗಳಿಂದ ನೋಟ್‍ಪುಸ್ತಕ,ಸಮವಸ್ತ್ರ,ಬ್ಯಾಗ್ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವ ಶಿಕ್ಷಕ ಗೆಳಯರ ಬಳಗದ ಸರ್ಕಾರಿ ಶಾಲೆ ಉಳಿಸುವ ಕಾಳಜಿ ಶ್ಲಾಘನೀಯ ಎಂದರು.
ಕೆಂಬೋಡಿಯಲ್ಲಿ ಶಿಥಿಲವಾಗಿದ್ದ ಕಟ್ಟಡವನ್ನು ದಾನಿಗಳ ನೆರವಿನಿಂದ ಕೆಡವಿ ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತ,ಆಧುನಿಕ ಶೈಕ್ಷಣಿಕ ಸೌಲಭ್ಯಗಳುಳ್ಳ ಕಟ್ಟಡವನ್ನು ಕಟ್ಟಲು ಕಾರಣವಾದ ಶಿಕ್ಷಕ ಗೆಳಯರ ಬಳಗ ಮಾದರಿಯ ಕೆಲಸ ಮಾಡಿದೆ ಎಂದರು.
ಇದೀಗ ಜಿಲ್ಲೆಯ 34 ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಫಿಲ್ಟರ್ ಒದಗಿಸಿರುವುದು, ಶಾಲಾ ಮಕ್ಕಳಿಗೆ ಇಡೀ ವರ್ಷಕ್ಕಾಗುವಷ್ಟು ನೋಟ್ ಪುಸ್ತಕ ಒದಗಿಸುವ ನಿರ್ಧಾರ, ಸ್ಮಾರ್ಟ್ ಬೋರ್ಡ್ ಒದಗಿಸುವ ಆಲೋಚನೆ ಮತ್ತಿತರ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿ, ಇದಕ್ಕೆ ಶಿಕ್ಷಣ ಇಲಾಖೆ, ಸಂಘಟನೆಗಳು ಸಹಕಾರ ನೀಡಬೇಕು ಎಂದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ರಾಮಕೃಷ್ಣಪ್ಪರವರು ಪ್ರೌಢಶಾಲಾ ಉಪಪ್ರಾಂಶುಪಾಲರಾಗಿ ವರ್ಗಾವಣೆಯಾಗಿದ್ದಾರೆ ಮುಂದೆ ಅವರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಸರ್ಕಾರಿ ಕೆಲಸವನ್ನು ನಿಷ್ಟೆಯಿಂದ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿರುವ ರಾಮಕೃಷ್ಣಪ್ಪ, ಬಿಇಒ ಆಗಿದ್ದ ಕೆಲವೇ ತಿಂಗಳುಗಳಲ್ಲಿ ಶಿಕ್ಷಕರ ವೇತನ ಬಟವಾಡೆಯಲ್ಲಿದ್ದ ಸಮಸ್ಯೆ ಪರಿಹರಿಸಿದ್ದಾರೆ, ಯಾವುದೇ ಕಡತ ವಿಳಂಬವಾಗದಂತೆ ವಿಲೇವಾರಿ ಮಾಡಿದ್ದಾರೆ ಎಂದರು.
ಸೂಲೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ, ವಿಷಯ ಪರಿವೀಕ್ಷಕ ಶಂಕರೇಗೌಡ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕ್ಷಕ ಗೆಳಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಶಿಕ್ಷಕ ಮುಖಂಡರಾದ ಚಾಮುಂಡೇಶ್ವರಿ ಮತ್ತಿತರರು ಮಾತನಾಡಿ, ರಾಮಕೃಷ್ಣಪ್ಪ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಎಲ್ಲರ ಮನಗೆದ್ದಿದ್ದರು ಎಂದು ಸ್ಮರಿಸಿದರು.
ಶಿಕ್ಷಕ ಗೆಳಯರ ಬಳಗದ ಪದಾಧಿಕಾರಿಗಳು ರಾಮಕೃಷ್ಣಪ್ಪ ಹಾಗೂ ಅವರ ಧರ್ಮಪತ್ನಿ ಪದ್ಮಜಾ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಈ ತಿಂಗಳು ನಿವೃತ್ತರಾದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ಶಿಕ್ಷಕ ಗೆಳಯರ ಬಳಗದ ಪದಾಧಿಕಾರಿಗಳಾದ ವೆಂಕಟಾಚಲಪತಿಗೌಡ, ಗೋವಿಂದು, ವೆಂಕಟರಾಂ, ಸೋಮಶೇಖರ್,ಕೃಷ್ಣಪ್ಪ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.