

ಮಂಗಳೂರು: ಫ್ರಾನ್ಸ್ ದೇಶದ ಲೂರ್ಡ್ಸ್ ನಗರದಲ್ಲಿನ ಬೆರ್ನದೆತ್ತ್ ಎಂಬ ಯುವತಿಗೆ, 1858 ಫೆಬ್ರವರಿ 11 ರಿಂದ, ಜುಲೈ ತಿಂಗಳ ತನಕ, 18 ಬಾರಿ ಮಾತೆ ಮರಿಯಮ್ಮನವರು ತಮ್ಮ ದರ್ಶನವಿತ್ತರು. ಅದರ ಸ್ಮರಣಾರ್ಥಕವಾಗಿ, ಪ್ರತಿ ವರುಷ, ಫೆಬ್ರವರಿ 11 ರಂದು, ಪ್ರಪಂಚದಾದ್ಯಂತ ಲೂರ್ದು ಮಾತೆಯ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.
ಲೂರ್ಡ್ಸ್ ನಗರದಲ್ಲಿ ದರ್ಶನವಿತ್ತ ಮಾತೆ ಮರಿಯಮ್ಮನವರನ್ನು, ಲೂರ್ದು ಮಾತೆ ಎಂದು ಕರೆಯುತ್ತಾರೆ.
ಫೆ. 11 ರಂದು ಜೆಪ್ಪು ಚರ್ಚಿನ ಸಂತ ಜೋಸೆಫ್ ನಗರದ ಮಾತೆ ಮರಿಯಮ್ಮನವರ ಗ್ರೊಟ್ಟೊವಿನ ಬಳಿ ಲೂರ್ದು
ಮಾತೆಯ ಪುಣ್ಯ ಸ್ಮರಣೆಯ ಹಬ್ಬವನ್ನು ತೇರು, ಮೆರವಣಿಗೆ ಹಾಗೂ ಸಾಂಭ್ರಮಿಕ ದಿವ್ಯ ಬಲಿಪೂಜೆಯನ್ನು
ಅರ್ಪಿಸುವುದರ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು.
ಜೆಪ್ಪು ಚರ್ಚಿನ ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್ ಡಿಸೋಜರವರು ಪ್ರಾರ್ಥನಾ ವಿಧಿಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೊ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಐವನ್ ಡಿಸೋಜಾ ಈ ಭಕ್ತಿ ಕಾರ್ಯದಲ್ಲಿ ಭಾಗವಹಿಸಿ ಮೇರಿ ಮಾತೆಯ ಆಶೀರ್ವಾದಕ್ಕೆ ಪಾತ್ರರಾದರು.
ಪುಟಾಣಿ ಮಕ್ಕಳು, ಯುವಜನರು, ಹಾಗೂ ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಾದ್ಯ ಬಳಗವು ಮೆರವಣಿಗೆಯ ಮೆರುಗನ್ನು ಇಮ್ಮಡಿಗೊಳಿಸಿತು. ಸಂಜೆ ಸುಮಾರು 6 ಗಂಟೆಗೆ ಸಾಂಕೇತಿಕವಾಗಿ ಬೆಲೂನಿನಿಂದ ತಯಾರಿಸಿದ ಜಪಮಾಲೆಯನ್ನು ಆಕಾಶದತ್ತ ಹಾರಿಸುತ್ತಾ ಬಲಿಪೂಜೆಯನ್ನು ಪ್ರಾರಂಭಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮ್ಯಾಕ್ಸಿಮ್ ಎಲ್. ನೊರೊನ್ಹಾರವರು ಪ್ರಧಾನ ಗುರುಗಳಾಗಿ, ಬಲಿಪೂಜೆಯನ್ನು ಅರ್ಪಿಸಿದರು. ಸಂತ ಜೋಸೆಫ್ ಗುರುಮಠದ ಮುಖ್ಯಸ್ಥರಾದ ವಂದನೀಯ ರೊನಾಲ್ಡ್ ಸೆರಾವೊ, ಹಾಗೂ ಹಲವಾರು ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಲೂರ್ದು ಮಾತೆಯ ಪವಾಡಗಳನ್ನು, ಸ್ಮರಿಸುತ್ತಾ ಅನಾರೋಗ್ಯದಿಂದ ಪೀಡಿತರಾದ ಎಲ್ಲರಿಗೂ ವ್ಯಾಧಿಸ್ಥರ ಅಭ್ಯಂಗವನ್ನು ನೀಡಿ, ವಿಶೇಷ ಪ್ರರ್ಥಾನಾ ವಿಧಿಯನ್ನು ನೆರವೇರಿಸಲಾಯಿತು. ಬಲಿಪೂಜೆಯ ಸಂದರ್ಭದಲ್ಲಿ, ಕಾಣಿಕೆಯಾಗಿ ಅರ್ಪಿಸಲಾದ ಸುಮಾರು 4 ಕ್ವಿಂಟಲ್ ಅಕ್ಕಿಯನ್ನು ವಿವಿಧ ಚರ್ಚುಗಳ 50 ಬಡ ಕುಟಂಬಗಳಿಗೆ ವಿತರಿಸಲಾಯಿತು. ಸಂಭ್ರಮದ ಪೂಜೆಯ ಬಳಿಕ ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹವನ್ನು (ಊಟದ ವ್ಯವಸ್ಥೆಯನ್ನು) ಏರ್ಪಡಿಸಲಾಗಿತ್ತು. 1500 ಜನರಿಗೆ ಊಟವನ್ನು, ಜೆಪ್ಪು ಚರ್ಚಿನ ವ್ಯಾಪ್ತಿ ಯಲ್ಲಿರುವ, ಜೋ ಜೋ ಕೇಟರರ್ಸ್, ಇದರ ಮಾಲಕರಾದ, ಶ್ರೀ ಸ್ಟ್ಯಾನಿ ಕ್ರಾಸ್ತರವರು ದಾನ ನೀಡಿದರು. ಈ ಹಬ್ಬವನ್ನು ಚರ್ಚಿನ ವೈಟ್ ಫ್ಲವರ್ ಅಸೋಸಿ ಯೇಷನ್ ಸಹಯೋಗದಲ್ಲಿ ಆಚರಿಸಲಾಯಿತು.
ಧರ್ಮಗುರುಗಳಾದ ವಂದನೀಯ ಮ್ಯಕ್ಸಿಮ್ ಡಿಸೋಜರವರು ಈ ಸಂಭ್ರಮಕ್ಕಾಗಿ ಶ್ರಮಿಸಿದ ಎಲ್ಲಾ ಭಕ್ತಾದಿಗಳಿಗೂ ಹಾಗೂ ದಾನಿಗಳಿಗೂ ಧನ್ಯವಾದವನ್ನು ಸಮರ್ಪಿಸಿದರು. ಸೊಶಿಯಲ್ ಮೂವ್‍ಮೆಂಟಿನ ಸ್ಥಾಪಕರಾದ ಶ್ರೀ ವಿಜಯ್ ಆಲ್ಫ್ರೇಡ್, ಅಧ್ಯಕ್ಷೆ, ಮಾಜಿ ಮೇಯರ್ ಶ್ರೀಮತಿ ಜಸಿಂತಾ ಆಲ್ಫ್ರೇಡ್, ಕಾರ್ಯದರ್ಶಿ ಶ್ರೀ ಸತೀಶ್ ಫೊನ್ಸೆಕಾ, ಸಂಘದ ಸದಸ್ಯರ, ಚರ್ಚಿನ ಪಾಲಾನಾ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ಶ್ರಮಿಸಿದ ಎಲ್ಲಾ ಭಕ್ತಾದಿಗಳ ಶ್ರಮವನ್ನು ವಂದನೀಯ ಮ್ಯಾಕ್ಸಿಮ್ ಡಿಸೋಜರವರು ಪ್ರಶಂಸಿದರು ಹಾಗೂ ತಮ್ಮ
ಮನದಾಳದ ವಂದನೆಗಳನ್ನು ಸಮರ್ಪಿಸಿದರು.
































