ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಕೋಲಾರ: ಶೈಕ್ಷಣಿಕ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಅಕ್ಷರದವ್ವ ಫಾತಿಮಾ ಷೇಕ್ರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯುವಂತಾಗಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಉಪ ನಿರ್ದೇಶಕ ರೇವಣ್ಣ ಸಿದ್ದಪ್ಪ ಹೇಳಿದರು.
ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯಶಿಕ್ಷಕರ ಸಾಹಿತ್ಯ ಪರಿಷತ್ ಹಾಗೂ ಅಕ್ಷರದವ್ವ ಫಾತಿಮಾ ಶೇಕ್ರ ಪ್ರತಿಷ್ಠಾನ ಬಂಗಾರಪೇಟೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಫಾತಿಮಾ ಶೇಕ್ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸುಮಾರು ೧೯೧ ವರ್ಷಗಳ ಹಿಂದೆ ಜನಿಸಿ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜೊತೆಯಲ್ಲಿ ಅಲ್ಪಸಂಖ್ಯಾತ ಹಿಂದುಳಿದ ಶೋಷಿತ ವರ್ಗದ ಮಕ್ಕಳಿಗಾಗಿ ಮೊದಲ ಶಾಲೆ ತೆರೆದವರ ಹೆಸರಿನಲ್ಲಿ ಪ್ರಶಸ್ತಿ ನೀಡುವಾಗ ಅರ್ಹತೆಯೇ ಮಾನದಂಡವಾಗಿರಲಿ ಎಂದು ಕಿವಿಮಾತು ಹೇಳಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಮಹಿಳೆಯರನ್ನು ಸಮಾಜ ಸರಿಯಾಗಿ ಸ್ಮರಿಸುತ್ತಿಲ್ಲವೆಂದು ವಿಷಾದಿಸಿದ ಅವರು, ಇಂತ ಸಂದರ್ಭದಲ್ಲಿ ಫಾತಿಮಾ ಷೇಕ್ ಪುಸ್ತಕ ಬಿಡುಗಡೆಯಾಗುತ್ತಿರುವುದು ಸ್ವಾಗತಾರ್ಹ ಎಂದರು.
ಫಾತಿಮಾ ಷೇಕ್ ಪುಸ್ತಕವನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾಹು ಚಾನ್ ಪಾಷಾ ಮಾತನಾಡಿ, ಕನ್ನಡದಲ್ಲಿ ಎರಡು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳು ಮಾತ್ರವೇ ಫಾತಿಮಾ ಷೇಕ್ರ ಜೀವನ ಚರಿತ್ರೆಕುರಿತು ಬೆಳಕು ಚೆಲ್ಲಿತ್ತು. ಇದರಿಂದ ಆಸಕ್ತಿನಾಗಿ ತಾವು ತೆಲುಗಿನಲ್ಲಿ ಪ್ರಕಟವಾಗಿದ್ದ ಸೈಯದ್ ನಸೀರ್ ಅಹಮ್ಮದ್ರ ಫಾತಿಮಾ ಶೇಕ್ ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಒಂದು ವರ್ಷಕಾಲ ಕಷ್ಟಪಟ್ಟು ಕನ್ನಡಕ್ಕೆ ಅನುವಾದಿಸಿ ಲೋಕಾರ್ಪಣೆ ಮಾಡಿದ್ದಾಗಿ ವಿವರಿಸಿ, ಈ ಪುಸ್ತಕ ಬಿಡುಗಡೆ ನೆಪದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಫಾತಿಮಾ ಶೇಕ್ರ ಜನ್ಮ ದಿನಾಚರಣೆ ನಡೆಯುತ್ತಿದೆಯೆಂದರು.
ಪುಸ್ತಕ ಬಿಡುಗಡೆ ಮಾಡಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜ.೩ರ ಸಾವಿತ್ರಿಬಾಯಿ ಫುಲೆ ಜನ್ಮದಿನದಿಂದ ಜ.೯ ಫಾತಿಮಾ ಶೇಕ್ರ ಜನ್ಮದಿನದವರೆವಿಗೂ ದೇಶಾದ್ಯಂತ ಮಹಿಳಾ ಶೈಕ್ಷಣಿಕ ಸಬಲೀಕರಣ ಸಪ್ತಾಹದಡಿ ವೈವಿಧ್ಯಮ ಕಾರ್ಯಕ್ರಮ ನಡೆಯುವಂತಾಗಿ ಇಬ್ಬರು ಮಹಾನ್ ಮಹಿಳೆಯರನ್ನು ಸ್ಮರಿಸುವಂತಾಗಲಿ ಎಂದು ಆಶಿಸಿದರು.
ಪುಸ್ತಕ ಕುರಿತು ಮಾತನಾಡಿದ ನಿರ್ಗಮಿತ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕಾ.ಹು.ಚಾನ್ಪಾಷಾರ ಮೂಲಕ ಕನ್ನಡಿಗರಿಗೆ ಫಾತಿಮಾ ಶೇಕ್ ಪರಿಚಯವಾಗುತ್ತಿರುವುದು ಹೆಮ್ಮೆಯಸಂಗತಿ ಪ್ರತಿ ವಿದ್ಯಾರ್ಥಿನಿ ಈ ಪುಸ್ತಕ ಓದಿ ಪ್ರೇರಿತರಾಗಲಿ ಎಂದರು.
ಕರ್ನಾಟಕ ರಾಜ್ಯ ಶಿಕ್ಷಕ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ, ಮರೆಯಾದ ನಕ್ಷತ್ರಗಳನ್ನು ಹುಡುಕಿ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮಆಯೋಜಿಸಿ ಫಾತಿಮಾ ಶೇಕ್ ನೆನಪಿನಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆಯೆಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಿಕ್ಷಕರ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ವೆಂಕಟೇಶಪ್ಪ ಮಾತನಾಡಿ, ಕಣ್ಮರೆಯಾಗಿರುವ ಸಾಧಕಿಯರ ಸ್ಮರಣೆಯಿಂದ ಮಾನವೀಯತೆ ಶಿಕ್ಷಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ಗಮನ ಮಹಿಳಾ ಸಮೂಹದ ಸಮನ್ವಯಾಧಿಕಾರಿ ಶಾಂತಮ್ಮ, ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಆರ್.ವಿಜಯಕುಮಾರಿ ಮಾತನಾಡಿ, ಫಾತಿಮಾ ಶೇಕ್ ಮತ್ತು ಸಾವಿತ್ರಿ ಬಾಯಿ ಫುಲೆ ಸಮಸ್ತ ಮಹಿಳಾ ಲೋಕಕ್ಕೆ ಪರಿಚಯಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ಎಂ.ಶಂಕರಪ್ಪ, ನೂತನಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿ.ರುದ್ರಪ್ಪ ಇತರರು ಉಪಸ್ಥಿತರಿದ್ದರು.
ಫಾತಿಮಾ ಶೇಕ್ ಪ್ರಶಸ್ತಿಯನ್ನು ಶಿಕ್ಷಕಿಯರಾದ ಸರ್ವತ್ ಉನ್ನೀಸ, ಶಾಜಿಯಾ ಹೈದರ್, ಎನ್.ಮಂಜುಳ, ಎಂ.ಎನ್.ಉಮಾದೇವಿ ಹಾಗೂ ಎಂ.ರಾಧಾಮಣಿಯವರನ್ನು ಸನ್ಮಾನಿಸಲಾಯಿತು.
ಕೊಂಡರಾಜನಹಳ್ಳಿ ಮಂಜುಳ ಕಾರ್ಯಕ್ರಮ ನಿರೂಪಿಸಿದರು.