

ಗಂಗೊಳ್ಳಿ; ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ಅಪ್ಪಂದಿರ ಜಯಂತೋತ್ಸವ ಆಚರಣೆಯನ್ನು ಮಾರ್ಚ್ 16 ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಒಟ್ಟು 71 ತಂದೆಯಂದಿರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ದೇವಾಲಯದ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರ ಮುಂದಾಳತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ನಂತರ ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಸ್ವಾಗತಿಸಲಾಯಿತು. ಸಭಾಂಗಣದಲ್ಲಿ ತಂದೆಯಂದಿರಿಗಾಗಿ ನೃತ್ಯ, ಮೈಮ್, ಅಭಿನಂದನೆ ಗೀತೆ, ವಿಡಿಯೋ ಕ್ಲಿಪ್ಪಿಂಗ್ ಕಾರ್ಯಕ್ರಮ ನೆರವೇರಿಸಲಾಯಿತು. ಕೆಲವು ಆಟಗಳನ್ನು ಆಡಿಸಿ ಬಹುಮಾನಗಳನ್ನು ನೀಡಲಾಯಿತು. ಧರ್ಮಗುರುಗಳು ಮಕ್ಕಳ ಪಾಲನೆ ಪೋಷಣೆಯಲ್ಲಿ ತಂದೆಯ ಪ್ರೀತಿ ಮತ್ತು ತ್ಯಾಗ ಪರದೆಯ ಹಿಂದೆ ಉಳಿದಿದೆ. ಆದರೂ ಅವರು ಬೇಸರಗೊಳ್ಳದೆ ಕುಟುಂಬದ ನಿರ್ವಹಣೆಯಲ್ಲಿ ಮತ್ತು ಮಕ್ಕಳ ಜೀವನವನ್ನು ರೂಪಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂಬ ಸಂದೇಶದೊಂದಿಗೆ ಎಲ್ಲಾ ತಂದೆಯವರನ್ನು ಅಭಿನಂದಿಸಿ ಶುಭ ಹಾರೈಸಿದರು. ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯ ಡಿಸೋಜ, ಕಾನ್ವೆಂಟಿನ ಸುಪೀರಿಯರ್ ಧರ್ಮಭಗಿನಿ ಡಯಾನ, ಕುಟುಂಬ ಆಯೋಗದ ಸಂಚಾಲಕರಾದ ಫೆಲಿಕ್ಸ್ ರೆಬೇರೊ ಹಾಗೂ ಕುಟುಂಬ ಆಯೋಗದ ಮತ್ತು ಜುಬಿಲಿ ಸಮಿತಿಯ ಸದಸ್ಯರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ಶ್ರೀಮತಿ ಜೆಸಿಂತಾ ಡಿಸೋಜ ಸ್ವಾಗತಿಸಿ, ಶ್ರೀಮತಿ ಜೆಸಿಂತಾ ಮಿರಂದರವರು ವಂದಿಸಿದರು. ಶ್ರೀಮತಿ ರೆನಿಟಾ ಬಾರ್ನೆಸ್ ಕಾರ್ಯಕ್ರಮ ನಿರೂಪಿಸಿದರು.














