ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಬ್ಯಾಂಕ್ ವಿರುದ್ದ ಕೆಲವರು ನಿರಂತರವಾಗಿ ಷಡ್ಯಂತ್ರ ನಡೆಸುತ್ತಿದ್ದು, ರೈತರು,ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಪ್ರಾಮಾಣಿಕ ಕೆಲಸದ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.
ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವರು ಬ್ಯಾಂಕ್ ವಿರುದ್ದ ಷಡ್ಯಂತ್ರ ನಿರಂತರವಾಗಿ ಮುಂದುವರೆಸಿದ್ದಾರೆ, ರಾಜಕೀಯವಾಗಿ ನಡೆಸುತ್ತಿರುವ ಇಂತಹ ಪ್ರಯತ್ನಗಳು ಸಫಲವಾಗದು ಎಂದರು.
ಬ್ಯಾಂಕನ್ನು ನಂಬಿರುವ ರೈತರು,ಮಹಿಳೆಯರ ಸೇವೆಯನ್ನು ಬದ್ದತೆಯಿಂದ ಮಾಡಿ, ಅವರ ಪ್ರೀತಿ, ಆಶೀರ್ವಾದವೇ ನಮಗೆ ಶಕ್ತಿಯಾಗಿದೆ, ಈ ರೈತ,ಮಹಿಳಾ ಶಕ್ತಿಯ ಮುಂದೆ ಬ್ಯಾಂಕಿನ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ವಿಫಲವಾಗುತ್ತದೆ ಎಂದು ತಿಳಿಸಿದರು.
ದಿವಾಳಿಯಾಗಿ ಜನರ ಮನದಿಂದಲೇ ದೂರವಾಗಿದ್ದ ಬ್ಯಾಂಕ್ ಕಳೆದ ಏಳು ವರ್ಷಗಳಿಂದ ಸಾಧಿಸಿರುವ ಪ್ರಗತಿಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ, ಇದನ್ನು ಸಹಿಸಲು ಕೆಲವರಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಬ್ಯಾಂಕಿಗೆ ನಾನು ಮುಖ್ಯವಲ್ಲ, ಆದರೆ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಬೇಕಾದ ಸಿಬ್ಬಂದಿಯೇ ಮುಖ್ಯ ಎಂದ ಅವರು, ಬ್ಯಾಂಕ್ ತೊಂದರೆಗೆ ಸಿಕ್ಕಿಹಾಕಿಕೊಂಡರೆ ನೀವು ಬೀದಿಗೆ ಬರುತ್ತೀರಿ ಎಂದು ಎಚ್ಚರಿಸಿದರು.
ಬ್ಯಾಂಕನ್ನು ಬಡ ರೈತರು, ತಾಯಂದಿರು ನಂಬಿದ್ದಾರೆ, ಅಂತಹ ಸಂಸ್ಥೆಯ ಘನತೆಗೆ ಕುತ್ತು ತಂದರೆ ಅದು ಇಡೀ ಸಮುದಾಯಕ್ಕೆ ಮಾಡಿದ ದ್ರೋಹವಾಗುತ್ತದೆ, ಅಂತಹವರನ್ನು ಜನ ಎಂದಿಗೂ ಕ್ಷಮಿಸಲ್ಲ ಎಂದರು.
ಗಣಕೀಕರಣ ಕಾರ್ಯಪೂರ್ಣಗೊಳಿಸಿ
ಸುಳ್ಳು ಆರೋಪ,ಭ್ರಷ್ಟತೆ ನಡೆದಿದೆ ಎಂಬ ಸ್ವಾರ್ಥಪರರ ಧ್ವನಿ ಅಡಗಲು ಸೊಸೈಟಿಗಳ ಗಣಕೀಕರಣ ಅತಿ ಮುಖ್ಯವಾಗಿದೆ, ಈ ಕಾರ್ಯ ಶೇ.75 ರಷ್ಟು ಮುಗಿದಿದೆ, ಉಳಿದ ಕಾರ್ಯವೂ ಶೀಘ್ರ ಮುಗಿಸಿದರೆ ಪಾರದರ್ಶಕತೆ ಆಡಳಿತದ ಮೂಲಕ ವೃಥಾ ಆರೋಪ ಮಾಡುವವರ ಬಾಯಿಗೆ ಬೀಗ ಜಡಿಯಬಹುದು ಎಂದರು.
ಈಗಾಗಲೇ ಅನ್ನದಾತನಿಗೆ ಅಗತ್ಯವಾದ ಎಲ್ಲಾ ಸಲಕರಣೆಗಳು ಒಂದೇ ಸೂರಿನಡಿ ಸಿಗುವ ಸೌಲಭ್ಯಗಳುಳ್ಳ ರೈತಮಾಲ್ ಸ್ಥಾಪನೆಯ ಚಿಂತನೆ ಕಾರ್ಯಗತವಾಗಲಿದೆ, ಜತೆಗೆ ಸೊಸೈಟಿಗಳ ವ್ಯಾಪ್ತಿಯಲ್ಲಿ ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ರೈತರು,ಮಹಿಳೆಯರಿಗೆ ನೆರವಾಗೋಣ ಎಂದರು.
ಇತ್ತೀಚೆಗೆ ನಡೆದ ಬ್ಯಾಂಕಿನ ಸರ್ವಸದಸ್ಯರ ಸಭೆಯಲ್ಲಿ ಯಾವೊಬ್ಬ ಸದಸ್ಯರೂ ಸಹಾ ಬ್ಯಾಂಕ್ ವಿರುದ್ದ ಮಾತನಾಡದೇ ನಮಗೆ ಆತ್ಮಸ್ಥೈರ್ಯ ತುಂಬಿದ್ದಾರೆ, ಬ್ಯಾಂಕಿಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಅವರ ನಂಬಿಕೆ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಬ್ಯಾಂಕಿನ ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ಅಧಿಕಾರಿಗಳಾದ ಅರುಣ್ ಕುಮಾರ್, ಪದ್ಮಮ್ಮ ಮತ್ತಿತರರಿದ್ದರು.