

ಕೋಲಾರ; ನ.28: ತಾಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ಪಿ ನಂಬರ್ ದುರಸ್ಥಿ ಹಾಗೂ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತಸಂಘದಿಂದ ತಾಲೂಕು ಕಚೇರಿಯೆದುರು ಖಾಲಿ ಚಂಬುಗಳೂಂದಿಗೆ. ಹೋರಾಟ ಮಾಡಿ ತಹಸೀಲ್ದಾರ್ಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹಿರಿಯ ಅಧಿಕಾರಿಗಳ ವಾಸಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ತಾಲೂಕು ಕಚೇರಿಯಲ್ಲಿ ಹೆಜ್ಜೆಹೆಜ್ಜೆಗೂ ರೈತರನ್ನು ಶೋಷಣೆ ಮಾಡುವ ದಲ್ಲಾಳಿಗಳ ಹಾವಳಿಗೆ ಕಡಿವಾಣವಿಲ್ಲದಂತಾಗಿದೆ. ಭೂಪರಿವರ್ತನೆಗೆ 3 ಲಕ್ಷ, ಪಿ ನಂಬರ್ ದುರಸ್ಥಿ ಮಾಡಲು 4 ಲಕ್ಷ ನಿಗಧಿ ಮಾಡಲು ಅಧಿಕಾರಿಗಳು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಿಂದ ತಾಲ್ಲೂಕು ಕಛೇರಿಗೆ ಬರುವ ರೈತರೆ ಶೌಚಾಲಯಕ್ಕೆ ಹೋಗಲು ಜೊತೆಯಲ್ಲಿ ಚಂಬುಗಳಲ್ಲಿ ನೀರು ತನ್ನಿ ಎಂದು ನಾಮಫಲಕ ಅಳವಡಿಸಿ ಎಂದು ತಹಸೀಲ್ದಾರ ರವರಿಗೆ ಸಲಹೆ ನೀಡಿದರು
ನೇರವಾಗಿ ರೈತರ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಜೊತೆಗೆ ಕನಿಷ್ಠಪಕ್ಷ ಅವರ ಸಮಸ್ಯೆಗಳನ್ನು ತಿಂಗಳಾನುಗಟ್ಟಲೇ ಅಲೆದಾಡಿದರೂ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಬ್ಯಾಗಿನಲ್ಲಿ ಕಡತ, ಕೈಯಲ್ಲಿ ಕಾಸು ಇದ್ದರೆ 24 ಗಂಟೆಯಲ್ಲಿ ಕೆಲಸವಾಗುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಕಚೇರಿಗೆ ಬರುವ ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕರಿಗೆ ಕನಿಷ್ಟಪಕ್ಷ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯಿಲ್ಲ. ಇರುವ ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿವೆ. ದೂರದ ಊರುಗಳಿಂದ ಬರುವ ಬಡವರು ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಸಮಸ್ಯೆಯನ್ನು ಕೇಳಲು ಹಿರಿಯ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಇದ್ದರೂ ರಿಯಲ್ ಎಸ್ಟೇಟ್ ಉದ್ಯಮಿಗಳು ಗಂಟೆಗಟ್ಟಲೇ ಕಚೇರಿಯಲ್ಲಿ ಕುಳಿತು ಕಷ್ಟಸುಖಗಳನ್ನು ಮಾತನಾಡಿಕೊಳ್ಳುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ದಾಖಲೆಗಳ ಸಮೇತ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದರೂ ಭೂಗಳ್ಳರ ಜೊತೆ ಕಂದಾಯ, ಸರ್ವೇ ಅಧಿಕಾರಿಗಳು ಶಾಮೀಲಾಗಿ ನೆಪ ಮಾತ್ರಕ್ಕೆ ಒತ್ತುವರಿ ತೆರವುಗೊಳಿಸಿದ ಫೆÇೀಟೋಗಳನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಸರ್ವೇ ನಂ.149/1, 149/2 ರಲ್ಲಿ 30 ಗುಂಟೆ, ಅಬ್ಬಣಿ ಕೆರೆ ಸರ್ವೇ ನಂ.79ರಲ್ಲಿ 94 ಎಕರೆ, ವೆಲಗಲಬರ್ರೆ ಸರ್ವೇ ನಂ.112ರಲ್ಲಿ 30 ಗುಂಟೆ ಇನ್ನೂ ಇಂತಹ ನೂರಾರು ಪ್ರಕರಣಗಳು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮಕೈಗೊಳ್ಳದೆ ಸರ್ಕಾರಿ ಆಸ್ತಿಗಳನ್ನು ಮಾರಾಟಕ್ಕಿಟ್ಟಿರುವುದು ಅನ್ನ ಕೊಟ್ಟ ಹುದ್ದೆಗೆ ದ್ರೋಹ ಬಗೆದಂತೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ವಯಸ್ಸಾದವರು, ದುರ್ಬಲರು ಕಚೇರಿಗೆ ಬಂದರೆ ಮೊದಲೇ 20 ಮೆಟ್ಟಿಲು ಹತ್ತಿ ಬಂದು ದಿನಗಟ್ಟಲೇ ಕಾರಿಡಾರ್ಗಳಲ್ಲಿ ನಿಲ್ಲುವ ಸಾಮಥ್ರ್ಯ ಇರುವವರಿಗೆ ಮಾತ್ರ ಪ್ರವೇಶ ಎಂಬಂತಾಗಿದೆ. ವಿಶೇಷಚೇತನರು ದುರ್ಬಲರಿಗೆ ಯಾವುದೇ ಸೌಲಭ್ಯವಿಲ್ಲದೆ ವೀಲ್ ಚೇರ್ ಇಲ್ಲದೆ ಪರದಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪ ಮಾಡಿದರು.
ಜನಸಾಮಾನ್ಯರ ಕೆಲಸ ಎಂದರೆ ಅಧಿಕಾರಿಗಳಿಗೆ ಕಾಲಕಸದಂತೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಾಗಿಯೇ ಆಡಳಿತ ನಡೆಸಬೇಕು. ಆದರೆ, ಅಧಿಕಾರಿಗಳ ದರ್ಪ ಯಾವ ರೀತಿ ಇದೆ ಎಂದರೆ ಭೂಗಳ್ಳರಿಗೆ, ಶ್ರೀಮಂತರಿಗೆ, ರಾಜಕಾರಣಿಗಳಿಗೆ ಒಂದು ನ್ಯಾಯ. ಬಡ, ರೈತ, ಕೂಲಿಕಾರ್ಮಿಕರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ.
ತಾಜ್ ಮಹಲ್ ನಂತೆ ಕಾಣುವ ತಾಲೂಕು ಕಚೇರಿ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಶ್ರೀಮಂತರು, ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.
ಮಾನ್ಯರು ಕೂಡಲೇ ತಾಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ದಶಕಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಸಾವಿರಾರು ರೈತರ ಪಿ ನಂಬರ್ ದುರಸ್ಥಿ ಹಾಗೂ ಸರ್ಕಾರಿ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ಮಾನ್ಯರನ್ನು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಡಾ.ನಯನ, ಪಿ ನಂಬರ್ ದುರಸ್ಥಿ ಹಾಗೂ ಭೂ ಪರಿವರ್ತನೆಗೆ ಲಕ್ಷಲಕ್ಷ ಲಂಚ ಪಡೆಯುವ ಬಗ್ಗೆ ಮಾಹಿತಿ ಇಲ್ಲ. ಜೊತೆಗೆ ಸರ್ಕಾರಿ ಆಸ್ತಿಗಳನ್ನು ಉಳಿಸುವ ಜವಾಬ್ದಾರಿ ಅಧಿಕಾರಿಗಳದ್ದು. ಮತ್ತು ಕಚೇರಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ,ಮಂಗಸಂದ್ರ ತಿಮಣ್ಣ , ಅಂಜಿನಪ್ಪ. ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಆಂಜಿನಪ್ಪ, ಚಂದ್ರಪ್ಪ, ಹೆಬ್ಬಣಿ ಆನಂದರೆಡ್ಡಿ,ಸುಪ್ರಿಂ ಚಲ ಗಂಗಾಧರ ಶಶಿಕುಮಾರ. ರಾಮಕೃಷ್ಣಪ್ಪ, ಗಣೇಶ್, ಮುನಿವೆಂಕಟಪ್ಪ, ಶೈಲಜ, ರತ್ನಮ್ಮ, ಭಾಗ್ಯಮ್ಮ, ಸುಪ್ರೀಂಚಲ, ಗಂಗಾಧರ್ ಮುಂತಾದವರಿದ್ದರು.
