ಕೋಲಾರ; ಏ.17: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಮೌನವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಣೆ ಮಾಡುತ್ತಿರುವ ಆಹಾರಪದಾರ್ಥಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ದನಕರುಗಳು ಸಹ ತಿನ್ನಲು ಯೋಗ್ಯವಿಲ್ಲದಂತಿದೆ.
ಅದನ್ನು ಸರಿಪಡಿಸಬೇಕಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಣ್ಣಿದ್ದೂ ಕುರುಡರಂತೆ ವರ್ತಿಸುವ ಮೂಲಕ ಮಕ್ಕಳು ಹಾಗೂ ಗರ್ಭಿಣಿಯರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ತಮಿಳುನಾಡು ಮೂಲದವರಿಗೆ ಗುತ್ತಿಗೆ ನೀಡಿದ್ದು, ಎಂಪಿಸಿಎಸ್ಗಳಲ್ಲಿ ಪಾಕೆಟ್ ಮಾಡಲಾಗುತ್ತಿದೆ. ಎಂಪಿಸಿಎಸ್ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಗುಣಮಟ್ಟದ ಪದಾರ್ಥಗಳನ್ನೇ ಪ್ಯಾಕಿಂಗ್ ಮಾಡಿ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕಳಪೆ ಗುಣಮಟ್ಟದ ಆಹಾರ ಪದಾರ್ಥ ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿ, ಬೇಧಿ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಯಾವುದೇ ಕ್ರಮವಾಗುತ್ತಿಲ್ಲ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರು ಗುಣಮಟ್ಟದ ಆಹಾರ ನೀಡುತ್ತಾರೆಂದು ಮಕ್ಕಳನ್ನು ಕಳುಹಿಸಿ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದು, ಈ ರೀತಿ ತೊಂದರೆಗಳಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಇಲಾಖೆಯ ಉಪನಿರ್ದೇಶಕರನ್ನು ಕೇಳಿದರೆ ಚುನಾವಣೆ ಒತ್ತಡ ಎನ್ನುತ್ತಾರೆ. ಸಿಡಿಪಿಒಗಳನ್ನು ಕೇಳಿದರೆ ಗುಣಮಟ್ಟದ ಅಧಿಕಾರಿಗಳು ಪರಿಶೀಲಿಸಿ ಉತ್ತಮವಾಗಿದೆ ಎಂದು ವರದಿ ನೀಡಿದ್ದಾರೆಂದು ಹೇಳುತ್ತಾರೆ. ಕೋಟ್ಯಾಂತರ ರೂಪಾಯಿ ಹಣ ಸರಕಾರ ನೀಡುತ್ತಿದ್ದರೂ ಈ ರೀತಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.
ಹಾಗಾಗಿ ಜಿಲ್ಲಾಧಿಕಾರಿಗಳು ಎಚ್ಚೆತ್ತು 24 ಗಂಟೆಯ ಒಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸದಿದ್ದರೆ ಏ.26ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತದಾನದಂದು ಪ್ರತಿ ಹಳ್ಳಿಯಲ್ಲೂ ಮತಗಟ್ಟೆಗಳ ಎದುರು ಕಳಪೆ ಆಹಾರದ ಜತೆಗೆ ಮಕ್ಕಳು, ಗರ್ಭಿಣಿಯರೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದಾಗಿ ಕೆ.ನಾರಾಯಣಗೌಡ ಹಾಗೂ ರೈತಸಂಘ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ಮುನಿಕೃಷ್ಣ, ಅಪ್ಪೋಜಿರಾವ್, ವಿಶ್ವ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಗಿರೀಶ್ ಎಚ್ಚರಿಕೆ ನೀಡಿದ್ದಾರೆ.