ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ರೈತರು,ಸಾರ್ವಜನಿಕರು ಸ್ವತಃ ತಾವೇ ತಮ್ಮ ಜಮೀನನ್ನು ಪೋಡಿ ಮತ್ತು ಭೂಪರಿವರ್ತನೆಗಾಗಿ ನಕ್ಷೆ ತಯಾರಿಸಲು ಸರ್ಕಾರ `ಸ್ವಾವಲಂಬಿ ಯೋಜನೆ’ಯನ್ನು ಆರಂಭಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಭೂಮಾಪನಾ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಬಿ.ಭಾಗ್ಯಮ್ಮ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರೈತರು ಮತ್ತು ಸಾರ್ವಜನಿಕರು ತಮ್ಮ ಜಮೀನಿನ 11ಇ ಅಥವಾ ಪೋಡಿ ಅಥವಾ ಭೂಪರಿವರ್ತನೆ ಪೂರ್ವ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ನಾಗರೀಕರು ತಮ್ಮ ಗುರುತನ್ನು ದೃಢೀಖರಿಸುವ ಮೂಲಕ ತಮ್ಮ ಸರ್ವೆ ನಂಬರಿನ ನಕ್ಷೆಗಾಗಿ ಇಲಾಖೆ ನೀಡಿರುವ ವೆಬ್ಸೈಟ್ ಅಥವಾ ನಾಡಕಚೇರಿಯ ಎಜಿಎಸ್ ಕೆ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಹುದಾಗಿದೆ ಎಂದು ತಿಳಿಸಿದ್ದಾರೆ.
ನಾಗರೀಕರು ಆನ್ಲೈನ್ನಲ್ಲಿ ಅಥವಾ ಮೊಬೈಲ್ ಮೂಲಕ ಲಾಗಿನ್ ಆದ ತಕ್ಷಣ ಅರ್ಜಿದಾರರು ಸಲ್ಲಿಸಯಸುವ ಸೇವೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿದಾರರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ಆಧಾರ್ಕಾರ್ಡ್ ಬಳಸಿ ತಮ್ಮ ಗುರುತನ್ನು ದೃಢೀಕರಿಸಬೇಕು ಎಂದು ತಿಳಿಸಿದ್ದಾರೆ.
ಜಮೀನಿನ ಸರ್ವೆ ನಂಬರ್ ಆಯ್ಕೆ ಮಾಡಿ, ವಹಿವಾಟಿನ ವಿಸ್ತೀರ್ಣವನ್ನು ನಮೂದಿಸಬೇಕು, ಇದಾದ ನಂತರ ಸೇವೆಗೆ ನಿಗಧಿಪಡಿಸಿದ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿದ ನಂತರ ಸರ್ವೆ ಇಲಾಖೆ ಪರಿಶೀಲಿಸಿ ಅಸ್ಥಿತ್ವದಲ್ಲಿರುವ ನಕ್ಷೆಯನು ಸಹಿ ಮಾಡಿ ನಾಗರೀಕರಿಗೆ ಆನ್ಲೈನ್ ಮೂಲಕವೇ ಕಳುಹಿಸುತ್ತದೆ ಎಂದು ವಿವರಿಸಿದ್ದಾರೆ.
ಈ ರೀತಿ ಇಲಾಖೆ ಕಳುಹಿಸಿದ ನಕ್ಷೆಯನ್ನು ಅರ್ಜಿದಾರರು ಮುದ್ರಿಸಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಉಪವಿಭಾಗ ಮಾಡಿ ಸಹಿಯೊಂದಿಗೆ ತಮ್ಮ ಲಾಗಿನ್ನಲ್ಲಿ ಅಪ್ಲೋಡ್ ಮಾಡಿದರೆ, ಅಪ್ ಲೋಡ್ ಆದ ನಕ್ಷೆಯನ್ನು ಸರ್ವೆ ಇಲಾಖೆಯಿಂದ ಪರಿಶೀಲಿಸಿ ಅನುಮೋದಿತ ನಕ್ಷೆಯನ್ನು ಕಳುಹಿಸುವುದರಿಂದ ಅದನ್ನು ಡೌನ್ಲೋಡ್ ಮಾಡಿಕೊಂಡು ಬಳಸಬಹುದು ಎಂದು ತಿಳಿಸಿದ್ದಾರೆ.
ರೈತರು, ಸಾರ್ವಜನಿಕರು ಹೆಚ್ಚಿನ ಮಾಹಿತಿ ಪಡೆಯಲು ತಹಸೀಲ್ದಾರ್ ಕಚೇರಿಯ ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಭೂದಾಖಲೆಗಳ ಇಲಾಖೆ ಉಪನಿರ್ದೇಶಕರಾದ ಬಿ.ಭಾಗ್ಯಮ್ಮ ತಿಳಿಸಿದ್ದಾರೆ.