

ಕೋಲಾರ,ಅ.03: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು, ಬದುಕು ರೂಪಿಸಿಕೊಂಡಿದ್ದೇವೆ ಎಂದರು.
ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯ್ದೆಯಡಿ, ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿ ಸೂಚನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಜಮೀನಿನಲ್ಲಿ ನಾವು ರೇಷ್ಮೆ ಟೊಮೆಟೊ, ಹೈನುಗಾರಿಕೆ ಮತ್ತು ತೋಟಗಾರಿಕೆ ವಲಯದಲ್ಲಿ ಬೆಳೆಗಳನ್ನು ಬೆಳೆಯಲು ಫಲವತ್ತಾಗಿದ್ದು ಇಂತಹ ಜಮೀನನ್ನು ಕೈಗಾರಿಕೆ ನೀಡಲು ಉದ್ದೇಶಿಸಿರುವುದು, ನಿಜಕ್ಕೂ ಖುಷಿಯಲ್ಲಿ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವಂತೆ ಇಡೀ ಗ್ರಾಮದ ಎಲ್ಲಾ ದಿಕ್ಕುಗಳಲ್ಲೂ ಕೈಗಾರಿಕಾ ಸ್ಥಾಪನೆಗೆ ಉದ್ದೇಶಿಸಿದ್ದು, ಹಲವಾರು ಜಮೀನುಗಳಲ್ಲಿ ವಾಸಿಸಲು ಮನೆಗಳನ್ನು ಕಟ್ಟಿಕೊಂಡಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳು ತೊಂದರೆಗೆ ಒಳಪಟ್ಟಿರುತ್ತದೆ.
ಕಳೆದ ಜುಲೈ 30 ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ, ತಾಲೂಕು ತಹಸಿಲ್ದಾರ್ಗೆ ಹಾಗೂ ಉಪ ನೊಂದಣಾಧಿಕಾರಿಗಳಿಗೆ 10 44 ಎಕರೆ ಜಮೀನುಗಳನ್ನು ಯಾವುದೇ ರೀತಿಯಾದ ದಾಸ್ತಾವೇಜುಗಳನ್ನು ನೊಂದಾಯಿಸಬಾರದೆಂದು ಆದೇಶಿಸಿದೆ.
ಇದರಿಂದ ರೈತರಿಗೆ ಸಹಕಾರಿ ಸಂಸ್ಥೆಗಳಲ್ಲಿ ಪಹಣಿ ಆಧಾರದ ಮೇಲೆ ಬಡ್ಡಿ ರಹಿತ ಸಾಲವನ್ನು ಪಡೆಯುವುದಕ್ಕೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅವಕಾಶವಿರುವುದಿಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಈ ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ ಪ್ರತಿಭಟನೆಯಲ್ಲಿ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ನಿಯೋಗದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಮುಖಂಡ ಕೆ.ಕೆ.ಮಂಜು, ಗ್ರಾಮಸ್ಥರಾದ ಸುರೇಶ್ ಬಾಬು, ಹನುಮೇಗೌಡ, ಆದಿನಾರಾಯಣ, ವೆಂಕಟರವಣ, ಯದರೂರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ಕುಮಾರ್, ಶ್ರೀರಾಮರೆಡ್ಡಿ ಇತರರು ಇದ್ದರು.

