ರೈತರು , ಕಿಸಾನ್ ರೈಲು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು -ಎಸ್.ಮುನಿಶಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ರೈತರು , ಕಿಸಾನ್ ರೈಲು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು . ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಹೊರ ರಾಜ್ಯಗಳಿಗೆ ರವಾನಿಸುವುದರ ಮೂಲಕ ಒಳ್ಳೆ ಲಾಭ ಗಳಿಸಬೇಕು ಎಂದು ಸಂಸದ ಸದಸ್ಯ ಎಸ್.ಮುನಿಶಾಮಿ ಹೇಳಿದರು . ದೊಡ್ಡನತ್ತ ರೈಲು ನಿಲ್ದಾಣದಲ್ಲಿ ಶನಿವಾರ ಕಿಸಾನ್ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿ ಕಿಸಾನ್ ರೈಲು ಸೇವೆ ಆರಂಭದೊಂದಿಗೆ ಈ ಭಾಗದ ರೈತರ ಬಹು ದಿನಗಳ ಕನಸು ನನಸಾಗಿದೆ . ಬೇಡಿಕೆಗೆ ಅನುಗುಣವಾಗಿ ರೈತರ ರೈಲನ್ನು ಓಡಿಸಲಾಗುವುದು . ರೈತರು ತಮ್ಮ ಉತ್ಪನ್ನಗಳಿಗೆ ಹೊರ ರಾಜ್ಯಗಳಿಂದ ಬೇಡಿಕೆ ಪಡೆದುಕೊಂಡು ಶೇ .೫೦ ರ ರಿಯಾಯಿತಿ ದರದಲ್ಲಿ ಸಾಗಾಣಿಕೆ ಮಾಡಬಹುದಾಗಿದೆ ಎಂದು ಹೇಳಿದರು .

ರಸ್ತೆ ಮೂಲಕ ದೆಹಲಿಗೆ ಮಾವು ಮತ್ತಿತರ ಉತ್ಪನ್ನಗಳನ್ನು ಸಾಗಿಸಲು ಕೆಜಿಯೊಂದಕ್ಕೆ ರೂ .೭.೮೦ ಖರ್ಚು ಬರುತ್ತದೆ . ರೈಲಿನ ಮೂಲಕ ರೂ .೨.೮೨ ಖರ್ಚು ತಗಲುತ್ತದೆ . ಮಾವಿನ ಹಣ್ಣನ್ನು ಮಾತ್ರವಲ್ಲದೆ , ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಲ್ಲಿ ಹೆಚ್ಚಾಗಿ ಬೆಳೆಯುವ ಟೊಮೇಟೊ ಮತ್ತಿತರ ತರಕಾರಿಗಳನ್ನೂ ಸಹ ದೇಶದ ವಿವಿಧ ನಗರಗಳಿಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು . ಬಂಗಾರಪೇಟೆ , ಕೋಲಾರ , ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರು ಸೇರುವ ರೈಲು ಮಾರ್ಗವನ್ನು ವಿದ್ಯುತೀಕರಣ ಗೊಳಿಸಲಾಗುವುದು . ಈ ಕಾರ್ಯಕ್ಕೆ ರಿ ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಹೇಳಿದರು , ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ , ಕಿಸಾನ್ ರೈಲು ಸಂಕಷ್ಟದಲ್ಲಿರುವ ರೈತರಿಗೆ ವರದಾನವಾಗಲಿದೆ . ಮೊದಲ ಬಾರಿಗೆ ಇಲ್ಲಿಂದ ದೆಹಲಿಯ ಆದರ್ಶ ನಗರಕ್ಕೆ ೨೫೦ ಟನ್ ಮಾವಿನ ಹಣ್ಣನ್ನು ಕಳಿಸಲಾಗುತ್ತಿದೆ . ರೈತರ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ಮುಂದುವರಿಯಲಿದ್ದು , ಹೆಚ್ಚಿನ ಅನುಕೂಲವಾಗುವುದು .ರೈತರು ನೇರವಾಗಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಸೇವೆ ಪಡೆದುಕೊಳ್ಳಬೇಕು ಎಂದು ಹೇಳಿದರು .

ರೈಲ್ವೆ ಉಪ ವ್ಯವಸ್ಥಾಪಕ ಅಶೋಕ್ ಕುಮಾರ್ ಶರ್ಮ , ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ , ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ರೆಡ್ಡಿ , ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ , ಮಾಜಿ ಅಧ್ಯಕ್ಷ ಬಂಡಪಲ್ಲಿ ಚಂದ್ರಾರೆಡ್ಡಿ , ಮುಖಂಡರಾದ ಎಂ.ಲಕ್ಷ್ಮಣಗೌಡ , ನಾರಾಯಣಸ್ವಾಮಿ , ಪುರಸಭಾ ಸದಸ್ಯರಾದ ನಾಗರಾಜ್ , ಪತಿವ್ವಲ್ಲಾ ಇದ್ದರು .