![](https://jananudi.com/wp-content/uploads/2024/02/Screenshot-946-9.png)
![](https://jananudi.com/wp-content/uploads/2024/02/29-srinivaspur-photo-1.jpg)
ಶ್ರೀನಿವಾಸಪುರ 1 : ರೈತರು ತಮ್ಮ ಬಂಜರು ಭೂಮಿಯಲ್ಲಿ ಈ ಬೆಳೆಯನ್ನು ಬೆಳೆದು ತಮ್ಮ ಅರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕೆಂದು ತಿಳಿಸಿದರು. ರೈತರು ಬದಲಾದ ಪರಿಸ್ಥಿತಿಯಲ್ಲಿ ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದರ ಮೂಲಕ ಅರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಗೋಡಂಬಿ ಒಣ ಪ್ರದೇಶಕ್ಕೆ ಸೂಕ್ತವಾದ ಬೆಳೆ. ಅದು ಯಾವುದೇ ಮಣ್ಣಿಗೆ ಹೊಂದಿಕೊಂಡು ಬೆಳೆಯಬಲ್ಲದು ಹಾಗೂ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಪಡೆದಿದೆ ಎಂದು ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ವೆಂಕಟೇಶ್ವರಲು ಹೇಳಿದರು.
ತಾಲೂಕಿನ ಗಂಜಿಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬುಧವಾರ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ . ಬಾಗಲಕೋಟೆ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ . ಹೊಗಳಗೆರೆ ಹಾಗೂ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಗೋಡಂಬಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆ ವಿಷಯದ ಬಗ್ಗೆ ರೈತರಿಗಾಗಿ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದರು.
ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ 10 ಗಿಡಗಳಾದರು ಬದುವಿನ ಮೇಲೆ ನೆಟ್ಟು ಬೆಳಿಸಿದರೆ ಅದರಿಂದ ಮಣ್ಣು ಮತ್ತು ನೀರು ಸಂರಕ್ಷಣೆ , ಪರಿಸರ ರಕ್ಷಣೆ , ರೈತರು ಆದಾಯ ದ್ವಿಗುಣಗೊಳಿಸಲು ಕೂಡಾ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು. ಹೆಚ್ಚು ಲಾಭ ತರುವ ಬೆಳೆಯಾಗಿರುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ರೈತರು ಈ ಸ್ವಯಂ ಪ್ರೇರಣೆಯಿಂದ ಗೋಡಂಬಿ ಬೆಳೆಯಲು ಮುಂದೆ ಬರಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಮಾತನಾಡಿ ಮಾವು ಬೆಳೆಗಾರರು ವರ್ಷ ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ . ತೋಟಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಆದರೆ ಗೋಡಂಬಿ ಬೆಳೆ ಬೆಳೆಯುವುದು ಹೆಚ್ಚು ವೆಚ್ಚದಾಯಕವಲ್ಲ. ಇದಕ್ಕೆ ರೋಗ ಬಾಧೆ ಹೆಚ್ಚಾಗಿ ತಟ್ಟುವುದಿಲ್ಲ. ಬೆಳೆಯನ್ನು ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ ಸುಮಾರು 30 ವರ್ಷ ಉತ್ತಮ ಫಸಲು ನೀಡುತ್ತದೆ. ವರ್ಷದಿಂದ ವರ್ಷಕ್ಕೆ ಸಹಜವಾಗಿಯೇ ಫಸಲಿನ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಿದರು.
ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ಎನ್.ಅಶ್ವತನಾರಾಯಣರೆಡ್ಡಿ ಮಾತನಾಡಿ ದೇಶದಾದ್ಯಂತ ಗೋಡಂಬಿ ಸಂಸ್ಕರಣ ಘಟಕಗಳಿವೆ. ಹಣ್ಣನ್ನು ವೈನ್ ಮತ್ತು ತಂಪು ಪಾನೀಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಗೋಡಂಬಿ ಬೀಜವನ್ನು ದಾಸ್ತಾನು ಮಾಡಿ ಲಾಭದಾಯಕ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ. ದೇಶ ವಿದೇಶಗಳಲ್ಲಿ ಗೋಡಂಬಿಗೆ ಬೇಡಿಕೆ ಇದೆ ಎಂದು ಹೇಳಿದರು.
ಬೆಂಗಳೂರಿನ ಜಿಕೆವಿಕೆ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾದ್ಯಾಪಕ ಡಾ.ಜಿಎಂ.ವರದರಾಜು, ಉಪವಲಯ ಅರಣ್ಯಾಧಿಕಾರಿ ಭರತ್ಕುಮಾರ್, ಹಿರಿಯ ತೋಟಗಾರಿಕೆ ಇಲಾಖಾ ಸಹಾಯಕ ನಿರ್ದೇಶಕ ರಮೇಶ್, ವೆಂಕಟಗಿರಿಯಪ್ಪ, ಗ್ರಾ.ಪಂ ಸದಸ್ಯೆ ವಸಂತಮ್ಮ , ಸುಧಾ , ಶಾಲೆಯ ಮುಖ್ಯ ಶಿಕ್ಷಕಿ ರೆಡ್ಡಮ್ಮ , ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ವಿಜ್ಞಾನಿಗಳಾದ ಡಾ.ಡಿ.ಶ್ರೀಕಂಠ ಪ್ರಸಾದ್, ಡಾ. ಜಗದೀಶ್ ಇದ್ದರು.