ಶ್ರೀನಿವಾಸಪುರ: ರೇಷ್ಮೆ ಕೃಷಿಯಲ್ಲಿ ರೈತರು ವೈಜ್ಞಾನಿಕ ಪದ್ಧತಿ ಅನುಸರಿಸಬೇಕು. ಅಧಿಕ ಬೇಡಿಕೆ ತಳಿ ಬೆಳೆಯಲು ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೇಷ್ಮೆ ಇಲಾಖೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ರೂ.60 ಲಕ್ಷ ವೆಚ್ಚದಲ್ಲಿ ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ತಾಂತ್ರಿಕ ಸೇವಾ ಕೇಂದ್ರ, ರೇಷ್ಮೆ ಗೂಡು ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ರೇಷ್ಮೆ ಗೂಡು ಬೆಲೆಯಲ್ಲಿ ಏರುಪೇರು ಸಾಮಾನ್ಯ. ಬೆಳೆಗಾರರು ತಾಳ್ಮೆಯಿಂದ ಬೆಳೆ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಂಡು ಮಲಬರಿ ಬುಡ ತೆಗೆಯುವ ಕೆಲಸಕ್ಕೆ ಕೈ ಹಾಕಬಾರದು. ಈ ಹಿಂದೆ ಹೀಗೆಯೇ ಮಾಡಿ, ಗೂಡಿಗೆ ಲಾಭದಾಯಕ ಬೆಲೆ ಬಂದಾಗ ಬೆಳೆಗಾರರು ಪರಿತಪಿಸಬೇಕಾಯಿತು. ಈ ಪರಿಸ್ಥಿತಿ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಅಧಿಕಾರಿಗಳು ಗೂಡಿನ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತಂದಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಅಧಿಕಾರಿಗಳು ರೇಷ್ಮೆ ಬೆಳೆ ವಿಸ್ತರಣೆಗೆ ಪ್ರಯತ್ನಿಸಬೇಕು. ಟೊಮೆಟೊ ಬೆಳೆದು ಅದೃಷ್ಟ ಪರೀಕ್ಷೆ ಮಾಡುವ ರೈತರು ರೇಷ್ಮೆ ಕೃಷಿಯನ್ನು ಕೈಗೊಳ್ಳಬೇಕು. ಬದಲಾದ ಪರಿಸ್ಥಿತಿಯಲ್ಲಿ ಯಾವುದೇ ಒಂದು ಬೆಳೆಯನ್ನು ಆಶ್ರಯಿಸುವುದು ಅಪಾಯಕಾರಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಪ್ರಸನ್ನ, ಮಂಜುನಾಥರೆಡ್ಡಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಅಧಿಕಾರಿ ಎಂ.ನಾಗರಾಜು, ಸಹಾಯಕ ನಿರ್ದೇಶಕ ವಿ.ಕೃಷ್ಣಪ್ಪ, ಚೌಡರೆಡ್ಡಿ ಇದ್ದರು.