ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು : ನೀಲಟೂರು ಚಿನ್ನಪ್ಪರೆಡ್ಡಿ

ಶ್ರೀನಿವಾಸಪುರ: ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.
ಪಟ್ಟಣದ ತೋಟಗಾರಿಕೆ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಿಸಾನ್ ಬಾಗೀದಾರಿ ಪ್ರಾಥಮಿಕ ಹಮಾಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾವಿನ ಕೊಯ್ಲು ಆಂಭವಾಗುತ್ತಿದೆ. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ, 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ಪ್ರಸಕ್ತ ಸಾಲಿನ ಮಿಷನ್ ಆನ್ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಆಫ್ ಹಾರ್ಟಿಕಲ್ಚರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಆಂದೊಲನವಾಗಿದ್ದು, ಮಾವಿನ ಕೊಯ್ಲೋತ್ತರ ಚಟುವಟಿಕೆ ಅತಿ ಮುಖ್ಯ. ಹಲವು ಸಂಸ್ಥೆಗಳು ರೈತರಿಗೆ ನೆರವಾಗುವ ಉಪಕರಣಗಳನ್ನು ಮಾರಾಟ ಮಾಡುತ್ತಿವೆ. ಮಾಹಿತಿ ಪಡೆದು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಕೃಷ್ಣ, ಡಾ. ಅನಿಲ್ ಕುಮಾರ್, ಅಶ್ವತ್ಥರೆಡ್ಡಿ ತೋಟಗಾರಿಕೆಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು. ಉಪನ್ಯಾಸದ ಬಳಿಕ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರೈತ ಮುಖಂಡರಾದ ವೀರಭದ್ರಸ್ವಾಮಿ, ಪ್ರಭಾಕರಗೌಡ, ಬೈರೆಡ್ಡಿ, ವೀರಪ್ಪರೆಡ್ಡಿ, ತೋಟಗಾರಿಕಾ ಅಧಿಕಾರಿಗಳಾದ ರಾಜೀವ್ ಕುಮಾರ್, ಎನ್.ಹರೀಶ್ ಕುಮಾರ್, ಕೆ.ವಿ.ರಮ್ಯರಾಣಿ, ಉಮಾ ಮಹೇಶ್ವರಿ, ವರಲಕ್ಷ್ಮಿ ಇದ್ದರು.