ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕೃಷಿಕರು ಗಿಡ ಬೆಳೆಸುವುದರ ಮೂಲಕ ತಮ್ಮ ಆರ್ಥಿಕ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕೆ.ಬಿ.ಬಾಲಚಂದ್ರ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಹಳ್ಳಿ ಹಾಡು ಸಾಂಸ್ಕøತಿಕ ಜಾನಪದ ಕಲಾ ಸಂಘದ ಕಲಾವಿದರು ರೈತರಿಗೆ ಅರಿವು ಕಾರ್ಯಕ್ರಮದಡಿ ಬುಧವಾರ ಪ್ರದರ್ಶಿಸಿದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿ, ನರೇಗಾ ಯೋಜನೆಯಡಿ ಗಿಡ ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಶ್ರೀಗಂಧ, ರಕ್ತಚಂದನ, ಹಲಸು, ಹೆಬ್ಬೇವು ಮತ್ತಿತರ ಮರಗಳನ್ನು ಬೆಳೆಸಲು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು. ಎಕರೆಯೊಂದರಲ್ಲಿ 160 ರಿಂದ 200 ಮರಗಳನ್ನು ಬೆಳೆಸಬಹುದಾಗಿದ್ದು, ಗಿಡಗಳನ್ನು ಅಭಿವೃದ್ಧಿ ಪಡಿಸಲು ತಲಾ ರೂ.80 ನೀಡಲಾಗುವುದು. ನರೇಗಾ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಮಳೆ ಕೊರತೆ ಎದುರಿಸುತ್ತಿರುವ ರೈತರು, ಮರ ಬೆಳೆಸಲು ಮುಂದಾಗಬೇಕು. ವಿವಿಧ ಜಾತಿಯ ಮರಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿಇಒ ರಾಜೇಶ್, ಮನೋಜ್ ಇದ್ದರು.